ಬಿಜಾಪುರ್: ಛತ್ತೀಸ್ ಘಡದಲ್ಲಿ ನಕ್ಸಲರ ಹಾವಳಿ ಮುಂದುವರೆದಿರುವಂತೆಯೇ ಕಾರ್ಯಾಚರಣೆ ನಡೆಸಿದ ಭದ್ರತಾ ಸಿಬ್ಬಂದಿಗಳು 12 ಮಂದಿ ನಕ್ಸಲರನ್ನು ಸದೆಬಡಿದಿದ್ದಾರೆ ಎಂದು ತಿಳಿದುಬಂದಿದೆ.
ಛತ್ತೀಸ್ ಘಡದ ಬಿಜಾಪುರ ಜಿಲ್ಲೆಯ ಪೂಜಾರಿ ಕಂಕರ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಇರುವ ಕುರಿತು ಖಚಿತ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಗಳು ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಮಾವೋ ನಾಯಕ ಹರಿಭೂಷಣ್ ಸೇರಿದಂತೆ ಕನಿಷ್ಟ 12 ಮಂದಿ ನಕ್ಸಲರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಅಂತೆಯೇ ಕಾರ್ಯಾಚರಣೆಯಲ್ಲಿ ಹಲವು ಭದ್ರತಾ ಸಿಬ್ಬಂದಿಗಳಿಗೆ ಗಾಯಗಳಾಗಿದ್ದು, ಈ ಪೈಕಿ ಗಂಭೀರವಾಗಿ ಗಾಯಗೊಂಡಿದ್ಗ ಓರ್ವ ಪೊಲೀಸ್ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇನ್ನು ಇತ್ತ ಭದ್ರತಾ ಸಿಬ್ಬಂದಿಗಳು ಗುಂಡಿನ ದಾಳಿ ನಡೆಸುತ್ತಿದ್ದಂತೆಯೇ ಪ್ರತಿದಾಳಿ ನಡೆಸಿದ ನಕ್ಸಲರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಪರಾರಿಯಾಗಿರುವ ನಕ್ಸಲರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಿಶೇಷ ಡಿಜಿ ಡಿಎಂ ಅವಸ್ಥಿ ಅವರು ಹೇಳಿದ್ದಾರೆ.
ತೆಲಂಗಾಣ ಮತ್ತು ಛತ್ತೀಸ್ ಘಡದ ನಕ್ಸಲ್ ನಿಗ್ರಹ ಪಡೆಗಳು ಈ ಜಂಟೀ ಕಾರ್ಯಾಚರಣೆ ನಡೆಸಿವೆ ಎಂದು ತಿಳಿದುಬಂದಿದೆ.