ರಾಷ್ಟ್ರೀಯ

ನೀರವ್‌ ಮೋದಿ, ಮೆಹುಲ್‌ ಚೋಸ್ಕಿ ಪಾಸ್‌ಪೋರ್ಟ್‌ ರದ್ದು

Pinterest LinkedIn Tumblr


ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿ 11,300 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪಲಾಯನಗೈದಿರುವ ಚಿನ್ನಾಭರಣ ವ್ಯಾಪಾರಿ ನೀರವ್‌ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್‌ ಚೋಸ್ಕಿ ಅವರ ಪಾಸ್‌ಪೋರ್ಟ್‌ಗಳನ್ನು ವಿದೇಶಾಂಗ ಇಲಾಖೆ ಅಧಿಕೃತವಾಗಿ ಶನಿವಾರ ರದ್ದು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯದ ಸಲಹೆ ಮೇರೆಗೆ ವಿದೇಶಾಂಗ ಇಲಾಖೆ ತಕ್ಷಣ ಜಾರಿಗೆ ಬರುವಂತೆ ಫೆಬ್ರವರಿ 16ರಂದು ನಾಲ್ಕು ವಾರಗಳ ಕಾಲ ಇಬ್ಬರ ಪಾಸ್‌ಪೋರ್ಟ್‌ಗಳನ್ನು ಅಮಾನತು ಮಾಡಿತ್ತು ಮತ್ತು ಪಾಸ್‌ಪೋರ್ಟ್‌ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸುವಂತೆ ಒಂದು ವಾರ ಗಡುವು ನೀಡಿತ್ತು.

‘ಇದುವರೆಗೆ ನೀರವ್‌ ಮತ್ತು ಮೆಹುಲ್‌ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಇಬ್ಬರ ಪಾಸ್‌ಪೋರ್ಟ್‌ಗಳನ್ನು ರದ್ದು ಮಾಡಲಾಗಿದೆ’ ಎಂದು ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿ ವಲಯದ ಮೂಲವೊಂದು ತಿಳಿಸಿದೆ.

ತನಿಖಾ ದಳಕ್ಕೆ ನೆರವಾಗುವ ನಿಟ್ಟಿನಲ್ಲಿ ಇಬ್ಬರು ವಂಚಕರ ಮೇಲೆ ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ನೀರವ್‌ ಮೋದಿಯ ವಕೀಲ ವಿಜಯ್‌ ಅಗರ್‌ವಾಲ್‌, ಸರಕಾರದ ಏಜೆನ್ಸಿಗಳು ವಿರುದ್ಧವಾಗಿ ಕೆಲಸ ಮಾಡುತ್ತಿವೆ. ಜಾರಿ ನಿರ್ದೇಶನಾಲಯ ಮತ್ತು ಪಾಸ್‌ಪೋರ್ಟ್‌ ಅಧಿಕಾರಿಗಳು ಪರಸ್ಪರ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿವೆ. ಪ್ರಾರಂಭದಲ್ಲಿ ಪಾಸ್‌ಪೋರ್ಟ್‌ ಇಲಾಖೆ ಪಾಸ್‌ಪೋರ್ಟ್‌ಅನ್ನು ಅಮಾನತು ಮಾಡಿತ್ತು ಮತ್ತು ಅದಾದ ನಂತರ ರದ್ದು ಮಾಡಿದೆ. ಜಾರಿ ನಿರ್ದೇಶನಾಲಯವು ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಇಬ್ಬರನ್ನು ಆಹ್ವಾನಿಸುತ್ತಿದೆ. ಪಾಸ್‌ಪೋರ್ಟ್‌ ಇಲ್ಲದ ವ್ಯಕ್ತಿ ವಿದೇಶದಲ್ಲಿದ್ದರೆ, ಆತ ಭಾರತಕ್ಕೆ ಮರಳಲು ಹೇಗೆ ಸಾಧ್ಯ ಎಂದು ಐಎನ್‌ಐ ಜತೆ ಮಾತನಾಡುವ ಸಂದರ್ಭ ಪ್ರಶ್ನಿಸಿದ್ದಾರೆ.

Comments are closed.