ದೆಹಲಿ: ಭಾರತದಲ್ಲಿ ದೊರಕುತ್ತಿರುವ 4ಜಿ ಎಲ್‌ಟಿಇ ಅಂತರ್ಜಾಲದ ವೇಗ ಜಗತ್ತಿನಲ್ಲೇ ಅತ್ಯಂತ ಕಡಿಮೆಯದ್ದರಲ್ಲಿ ಒಂದಾಗಿದೆ ಎಂದು ಮತ್ತೊಮ್ಮೆ ಕಂಡುಬಂದಿದೆ.
ಲಂಡನ್ ಮೂಲದ ವೈರ್‌ಲೆಸ್ ಕವರೇಜ್ ಮ್ಯಾಪಿಂಗ್ ಸಂಸ್ಥೆ ಓಪನ್‌ಸಿಗ್ನಲ್ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಅಂತರ್ಜಾಲ ಸೇವಾ ವೇಗ ಪಾಕಿಸ್ತಾನದ್ದಕ್ಕಿಂತಲೂ ಕೆಳಮಟ್ಟದ್ದಾಗಿದೆ ಎಂದು ತಿಳಿಸಿದೆ.
ಭಾರತದ ಸರಾಸರಿ ಅಂತರ್ಜಾಲ ವೇಗ 6.07mbps ನಷ್ಟು ಕಂಡುಬಂದಿದ್ದರೆ ಪಾಕಿಸ್ತಾನದಲ್ಲಿ ಸರಕಾಸರಿ 13.56mbps ನಷ್ಟು ವೇಗದಲ್ಲಿ ಅಂತರ್ಜಾಲದ ವೇಗ ಕಂಡುಬಂದಿದೆ. ಇದೇ ಪಟ್ಟಿಯಲ್ಲಿ ಸಿಂಗಪುರ ಟಗ್ರ ಸ್ಥಾನದಲ್ಲಿದ್ದು ಸರಾಸರಿ 44.31mbps ನಷ್ಟು ವೇಗದ ಅಂತರ್ಜಾಲ ಸೇವೆ ಒದಗಿಸುತ್ತಿದೆ.
4ಜಿ ಲಭ್ಯತೆಯಲ್ಲಿ ಜಾಗತಿಕ ಮಟ್ಟದ ರ‍್ಯಾಂಕಿಂಗ್‌ನಲ್ಲಿ ಏರಿಕೆ ಕಂಡಿರುವ ಭಾರತ 14ನೇ ಸ್ಥಾನದಲ್ಲಿದೆ. ಆದರೆ 4ಜಿ ಡೌನ್‌ಲೋಡ್ ವೇಗದಲ್ಲಿ ಭಾರತದ ಸರಾಸರಿ ವೇಗ 10mbpsಗಿಂತಲೂ ಕಡಿಮೆಯಿದೆ.
4ಜಿ ಅಂತರ್ಜಾಲ ಲಭ್ಯತೆಯಲ್ಲಿ ದಕ್ಷಿಣ ಕೊರಿಯಾ ಅಗ್ರಸ್ಥಾನದಲ್ಲಿದ್ದು ಜಪಾನ್ ನಂತರದ ಸ್ಥಾನದಲ್ಲಿದ್ದು ಶೇ 90ಕ್ಕಿಂತಲೂ ಹೆಚ್ಚಿನ ದರದಲ್ಲಿ 4ಜಿ ಅಂತರ್ಜಾಲ ಸೇವೆ ಲಭ್ಯವಿದೆ. ನಾರ್ವೆ, ಹಾಂಕಾಂಗ್ ಹಾಗು ಅಮೆರಿಕ ಇದೇ ವಿಷಯದಲ್ಲಿ ಸಾಕಷ್ಟು ಉತ್ತಮ ಸಾಧನೆ ಮಾಡಿವೆ.
ಅತ್ಯುತ್ತಮ ಅಂತರ್ಜಾಲ ದೊರಕುವ ದೇಶಗಳ ಸರಾಸರಿ ಡೌನ್‌ಲೋಡ್ ವೇಗ 45mbpsನಲ್ಲಿದ್ದು ಮುಂದಿನ ದಿನಗಳಲ್ಲಿ 50mbpsಗೇರುವ ನಿರೀಕ್ಷೆಯನ್ನು ಓಪನ್‌ಸಿಗ್ನಲ್ ವ್ಯಕ್ತಪಡಿಸಿದೆ.
ತನ್ನ ಅಧ್ಯಯನದ ಅಂಗವಾಗಿ ಓಪನ್‌ಸಿಗ್ನಲ್ ಜಗತ್ತಿನಾದ್ಯಂತ 48,52,320 ಬಳಕೆದಾರರನ್ನು ಸಂಪರ್ಕಿಸಿದೆ.