ರಾಷ್ಟ್ರೀಯ

ಪಿಎನ್’ಬಿ ವಂಚನೆ ಪ್ರಕರಣ: ಬ್ಯಾಂಕ್ ನ ಮತ್ತೋರ್ವ ಹಿರಿಯ ಅಧಿಕಾರಿ ಬಂಧನ

Pinterest LinkedIn Tumblr

ನವದೆಹಲಿ: ಬಹುಕೋಟಿ ಪಂಜಾಬ್ ನ್ಯಾಷನಲ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್’ನ ಜನರಲ್ ಮ್ಯಾನೇಜರ್ ದರ್ಜೆಯ ಅಧಿಕಾರಿಯೊಬ್ಬರನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧನಕ್ಕೊಳಪಡಿಸಿದ್ದಾರೆ.

ರಾಜೇಶ್ ಜಿಂದಾಲ್ ಬಂಧಿತ ಆರೋಪಿಯೆಂದು ಹೇಳಲಾಗುತ್ತಿದೆ. ರಾಜೇಶ್ ಅವರು 2009-11ರ ಅವಧಿಯಲ್ಲಿ ಮುಂಬೈನ ಬ್ರಾಡಿ ಹೌಸ್ ಬ್ರಾಂಚ್’ನ ಮುಖ್ಯಸ್ಥರಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿನ್ನೆಯಷ್ಟೇ ನೀರವ್ ಮೋದಿ ಮತ್ತು ಚೋಸ್ಕಿ ಅವರಿಗೆ ಸೇರಿದ ಕಂಪನಿಗಳ 5 ಹಿರಿಯ ಅಧಿಕಾರಿಗಳನ್ನು ಬಂಧನಕ್ಕೊಳಪಡಿಸಿದ್ದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ನೀರವ್ ಮೋದಿ ಫೈರ್ ಸ್ಟಾರ್ ಇಂಟರ್ ನ್ಯಾಷನಲ್ ಕಂಪನಿಯ ಹಣಕಾಸು ವಿಭಾಗದ ಅಧ್ಯಕ್ಷ ವಿಫುಲ್ ಅಂಬಾನಿ, ಕಂಪನಿಯ ಕಾರ್ಯಕಾರಿ ಸಹಾಯಕಿ ಕವಿತಾ ಮಂಕಿಕರ್, ಹಿರಿಯ ಅಧಿಕಾರಿ ಅರ್ಜುನ್ ಪಾಟೀಲ್ ಅವರನ್ನು ರೂ.6498 ಕೋಟಿ ಮೊತ್ತದ ಋಣಪತ್ರಗಳನ್ನು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂದೆ ಬಂಧನಕ್ಕೊಳಪಡಿಸಲಾಗಿದೆ.

ನೀರವ್ ಚಿಕ್ಕಪ್ಪರಾಗಿರುವ ಮೆಹುಲ್ ಚೋಕ್ಸಿ ಒಡೆತನದ ಗೀತಾಂಜಲಿಯ ಅಂಗಸಂಸ್ಥೆ ನಕ್ಷತ್ರದ ಮುಖ್ಯ ಹಣಕಾಸು ಅಧಿಕಾರಿ ಕಪಿಲ್ ಖಂಡೇಲ್ ವಾಲ್ ಮತ್ತು ಮ್ಯಾನೇಜರ್ ನಿತೇನ್ ಶಾಹಿಯನ್ನು ಕೂಡ ಸಿಬಿಐ ಬಂಧನಕ್ಕೊಳಪಡಿಸಿದ್ದು, ಹಗರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಒಟ್ಟು 12 ಮಂದಿಯನ್ನು ಈ ವರೆಗೂ ಬಂಧನಕ್ಕೊಳಪಡಿಸಿದೆ ಎಂದು ವರದಿಗಳು ತಿಳಿಸಿವೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ ನಡೆದ ರೂ.11,400 ಕೋಟಿಗಳ ವಂಚನೆ ಮತ್ತು ಅವ್ಯವಹಾರ ಪ್ರಕರಣ ಇತ್ತೀಚೆಗಷ್ಟೇ ಬಯಲಿಗೆ ಬಂದಿತ್ತು. ಹಗರಣದ ಮುಖ್ಯ ಆರೋಪಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿಯವರು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ವಿದೇಶಕ್ಕೆ ಪರಾರಿಯಾಗಿದ್ದರು.

ಪ್ರಕರಣ ಸಂಬಂಧ ಜಾರಿ ನಿರ್ದೇಶನಾಯಲದ ಅಧಿಕಾರಿಗಳು ನೀರವ್ ಮೋದಿಯವರಿಗೆ ಸಂಬಂಧಿಸಿದ ರೂ.5,600 ಕೋಟಿ ಮೌಲ್ಯದ ವಜ್ರ, ಚಿನ್ನ ಮತ್ತು ಇತರೆ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.

ತೆರಿಗೆ ಇಲಾಖೆಯ ಅಧಿಕಾರಿಗಳು ನೀರವ್ ಮೋದಿಯವರ ದೆಹಲಿ, ಮುಂಬೈ, ಸೂರತ್ ಮತ್ತು ಜೈಪುರದಲ್ಲಿರುವ ಆಸ್ತಿಗಳ ಮೇಲೂ ದಾಳಿ ನಡೆಸಿದ್ದರು.

Comments are closed.