ರಾಷ್ಟ್ರೀಯ

ಪ್ರಧಾನಿ ಮೋದಿಗೆ ಪ್ಯಾಲೆಸ್ತೀನ್‌ನ ಅತ್ಯುನ್ನತ ‘ಗ್ರಾಂಡ್‌’ಕಾಲರ್‌’ ಗೌರವ

Pinterest LinkedIn Tumblr

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐತಿಹಾಸಿಕ ಪ್ಯಾಲೆಸ್ತೀನ್‌ ಭೇಟಿಗಾಗಿ ಶನಿವಾರ ರಮಲ್ಲಾಗೆ ಆಗಮಿಸಿದರು. ಅವರನ್ನು ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ ಆತ್ಮೀಯವಾಗಿ ಸ್ವಾಗತಿಸಿದರು.

1. ಭಾರತದ ಪ್ರಧಾನಿಯೊಬ್ಬರು ಪ್ಯಾಲೆಸ್ತೀನ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ರಮಲ್ಲಾಗೆ ತೆರಳು ಮಾರ್ಗದಲ್ಲಿ ಮೋದಿ ಅವರಿಗೆ ಜೋರ್ಡಾನಿನ ರಾಯಲ್‌ ಹೆಲಿಕಾಪ್ಟರ್‌ಗಳು ಮತ್ತು ಇಸ್ರೇಲ್‌ನ ವಾಯುಪಡೆ ಹೆಲಿಕಾಪ್ಟರ್‌ಗಳು ಬೆಂಗಾವಲು ನೀಡಿದವು.

2. ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ ಜತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮರುಸ್ಥಾಪನೆಯಾಗಬಹುದೆಂಬ ಆಶಯ ವ್ಯಕ್ತಪಡಿಸಿದರು. ‘ಭಾರತ ಮತ್ತು ಪ್ಯಾಲೆಸ್ತೀನ್‌ ಬಾಂಧವ್ಯಗಳು ಕಾಲದ ಪರೀಕ್ಷೆಗಳಲ್ಲಿ ಗೆದ್ದು ಗಟ್ಟಿಗೊಂಡಿವೆ. ಪ್ಯಾಲೆಸ್ತೀನ್ ಜನರ ಹಿತಾಸಕ್ತಿಗೆ ಭಾರತ ಬದ್ಧವಾಗಿದೆ ಎಂದು ನಾನು ಅಧ್ಯಕ್ಷ ಅಬ್ಬಾಸ್‌ ಅವರಿಗೆ ಭರವಸೆ ನೀಡಿದ್ದೇನೆ’ ಎಂದು ಮೋದಿ ನುಡಿದರು.

3. ಎರಡೂ ದೇಶಗಳ ನಡುವೆ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮ ನಡೆಯುತ್ತಿದ್ದು, ಈ ಮಿತಿಯನ್ನು 50ರಿಂದ 100ಕ್ಕೆ ಹೆಚ್ಚಿಸುತ್ತಿರುವುದಾಗಿ ಪ್ರಕಟಿಸಿದರು.

4. ಇಸ್ರೇಲ್‌ ಜತೆಗೆ ಶಾಂತಿ ಪ್ರಕ್ರಿಯೆಗೆ ನೆರವಾಗುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಬೇಕೆಂದು ನಾವು ಬಯಸುತ್ತೇವೆ ಎಂದು ಪ್ಯಾಲೆಸ್ತೀನ್‌ ಅಧ್ಯಕ್ಷ ಮೆಹಮೂದ್ ಅಬ್ಬಾಸ್‌ ನುಡಿದರು.

5. ರಮಲ್ಲಾಗೆ ಆಗಮಿಸಿದ ಬಳಿಕ ಪ್ರಧಾನಿ ಮೋದಿ ಅವರು, ಪ್ಯಾಲೆಸ್ತೀನ್‌ನ ದಿವಂಗತ ಅಧ್ಯಕ್ಷ ಯಾಸಿರ್ ಅರಾಫತ್‌ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಪ್ರಧಾನಿ ರಾಮಿ ಹಮ್ದುಲ್ಲಾ ಜತೆಗೆ ಯಾಸಿರ್‌ ಅರಾಫತ್‌ ಮ್ಯೂಸಿಯಂ ವೀಕ್ಷಿಸಿದರು.

6. ಭಾರತ ಮತ್ತು ಪ್ಯಾಲೆಸ್ತೀನ್‌ ನಡುವಣ ಬಾಂಧವ್ಯಗಳಿಗೆ ಪ್ರಧಾನಿ ಮೋದಿ ಕೊಡುಗೆಗಳನ್ನು ಗೌರವಿಸಿದ ಅಧ್ಯಕ್ಷ ಅಬ್ಬಾಸ್‌, ಭಾರತದ ಪ್ರಧಾನಿಗೆ ಪ್ಯಾಲೆಸ್ತೀನ್‌ನ ಅತ್ಯುನ್ನತ ಗೌರವವಾದ ‘ಗ್ರಾಂಡ್‌ ಕಾಲರ್‌’ ಪ್ರದಾನ ಮಾಡಿ ಸತ್ಕರಿಸಿದರು. ಇದು ವಿದೇಶೀ ಗಣ್ಯರಿಗೆ ಪ್ಯಾಲೆಸ್ತೀನ್‌ ನೀಡುವ ಅತ್ಯುನ್ನತ ಗೌರವವಾಗಿದೆ.

7. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಅಬ್ಬಾಸ್‌ ಪ್ರಮುಖ ದ್ವಿಪಕ್ಷೀಯ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು.

8. ಪ್ಯಾಲೆಸ್ತೀನ್‌ಗೆ ನೀವು ನೀಡಿದ ಐತಿಹಾಸಿಕ ಭೇಟಿಗಾಗಿ ನಾವು ಸಲ್ಲಿಸುತ್ತಿರುವ ಗೌರವವಿದು. ಭಾರತದ ಜನತೆ ನಮ್ಮ ಮೇಲೆ ಹೊಂದಿರುವ ಪ್ರೀತಿ-ಗೌರವಗಳ ದ್ಯೋತಕವಿದು. ಭಾರತದ ನಾಯಕರು ಯಾವತ್ತೂ ಪ್ಯಾಲೆಸ್ತೀನ್‌ ಶಾಂತಿ ಸ್ಥಾಪನೆಗೆ ಬೆಂಬಲವಾಗಿದ್ದಾರೆ’ ಎಂದು ಒಪ್ಪಂದಗಳಿಗೆ ಸಹಿ ಹಾಕಿದ ಬಳಿಕ ಅಧ್ಯಕ್ಷ ಅಬ್ಬಾಸ್‌ ಮೆಚ್ಚುಗೆ ವ್ಯಕ್ತಪಡಿಸಿದರು.

Comments are closed.