ರಾಷ್ಟ್ರೀಯ

ಆಧಾರ್‌ ಇಲ್ಲದ್ದಕ್ಕೆ ಅಡ್ಮಿಶನ್‌ ನಿರಾಕರಣೆ: ಆಸ್ಪತ್ರೆಯ ಗೇಟ್‌ ಬಳಿಯೇ ಹೆರಿಗೆ

Pinterest LinkedIn Tumblr


ಗುರುಗ್ರಾಮ: ಆಧಾರ್ ಕಾರ್ಡ್ ತಂದಿಲ್ಲವೆಂಬ ಕಾರಣಕ್ಕೆ ಪ್ರಸವಕ್ಕೆ ಮುನ್ನ ನಡೆಯಬೇಕಾಗಿದ್ದ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಎಮರ್ಜೆನ್ಸಿ ವಾರ್ಡ್‌ ಬಳಿಯೇ ಮಗುವಿಗೆ ಜನ್ಮ ನೀಡಿದ್ದಾರೆ.

ಮಧ್ಯಪ್ರದೇಶ ಮೂಲದ ಮುನ್ನಿ ಎಂಬ ಈ ಮಹಿಳೆಗೆ ಶುಕ್ರವಾರದಂದು ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮುನ್ನಿಯ ಕುಟುಂಬಸ್ಥರು ಈಕೆಯನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗರ್ಭವತಿ ಆದಾಗಿನಿಂದಲೂ ಒಂದು ಬಾರಿಯೂ ಮುನ್ನಿ ವೈದ್ಯರ ಬಳಿ ಚೆಕ್‌-ಅಪ್‌ ಮಾಡಿಸಿರಲಿಲ್ಲ. ಇದನ್ನರಿತ ವೈದ್ಯೆ ಹರಿಣಿ, ಹೆರಿಗೆಗೂ ಮುನ್ನಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಲು ಹೇಳಿದ್ದಾರೆ.

ಆದರೆ ಅಲ್ಟ್ರಾಸೌಂಡ್ ಸ್ಕ್ಯಾನ್ ಸೆಂಟರ್‌ನಲ್ಲಿದ್ದ ಏಕ್ತಾ ಮಾನ್‌, ಮುನ್ನಿ ಬಳಿ ಆಧಾರ್ ಕಾರ್ಡ್ ಇಲ್ಲವೆಂಬ ನೆಪವೊಡ್ಡಿ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿಸಲು ನಿರಾಕರಿಸಿದ್ದಾರೆ. ಮುನ್ನಿಗೆ ಆಧಾರ್‌ ಸಂಖ್ಯೆ ತಿಳಿದಿತ್ತಾದರೂ ಅದರ ಒಂದು ಪ್ರತಿ ಕಡ್ಡಾಯವಾಗಿ ತಂದರೆ ಮಾತ್ರ ಸ್ಕ್ಯಾನ್ ಗೆ ಅನುಮತಿಸುವುದಾಗಿ ಹೇಳಿದ್ದಾರೆ. ಈ ವೇಳೆಗಾಗಲೇ ಮುನ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಎಮರ್ಜೆನ್ಸಿ ವಾರ್ಡ್‌ ಬಳಿ ಬಿದ್ದ ಈಕೆಯ ರಕ್ಷಣೆಗೆ ಕೆಲ ಮಹಿಳೆಯರು, ಇತರೇ ರೋಗಿಗಳು ಎಲ್ಲರೂ ಜತೆಯಾಗಿದ್ದಾರೆ. ಬಳಿಕ ಬೆಡ್‌ ಶೀಟ್‌ ಹಾಗೂ ಇತರೇ ಬಟ್ಟೆಗಳನ್ನು ಬಳಸಿ ಮುನ್ನಿಯ ಹೆರಿಗೆ ಮಾಡಿದ್ದಾರೆ.

ಇಷ್ಟೆಲ್ಲಾ ನಡೆದು ಸುಮಾರು 20 ನಿಮಿಷಗಳ ಬಳಿಕ ಆಸ್ಪತ್ರೆ ಸಿಬ್ಬಂದಿಗಳು ಆಕೆಯನ್ನು ಲೇಬರ್‌ ವಾರ್ಡ್‌ಗೆ ದಾಖಲಿಸಿದ್ದಾರೆ. ‘ ನನ್ನ ಬಳಿ ವೋಟರ್‌ ಐಡಿ ಇತ್ತು, ಆದರೆ ಅವರ ರೂಲ್ಸ್‌ ಪ್ರಕಾರ ಇದ್ಯಾವುದಕ್ಕೂ ಬೆಲೆಯಿಲ್ಲವಂತೆ, ಕೇವಲ ಆಧಾರ್‌ ಕಾರ್ಡ್‌ ತೋರಿಸಿದರೆ ಮಾತ್ರ ಹೆರಿಗೆ ಮಾಡಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಹೆಂಡತಿಯನ್ನು ಬಿಟ್ಟು ಮನೆಗೆ ತೆರಳಿ ಆಧಾರ್‌ ಕಾರ್ಡ್‌ ತರುವಷ್ಟು ಸಮಯವೂ ನಮ್ಮ ಬಳಿಯಿರಲಿಲ್ಲ’ಎಂದು ಮುನ್ನಿಯ ಗಂಡ ಹೇಳಿದ್ದಾರೆ.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿಡಿದ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ ಇಬ್ಬರು ವೈದ್ಯರನ್ನು ಕೆಲಸದಿಂದ ಅಮಾನತು ಮಾಡಿದೆ. ಆದರೆ ಇಷ್ಟೆಲ್ಲಾ ಅವಾಂತರಕ್ಕೆ ಕಾರಣರಾದ ಡಾ. ಏಕ್ತಾ ಮಾನ್‌ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Comments are closed.