ರಾಷ್ಟ್ರೀಯ

ಕಾಶ್ಮೀರ ಅಸೆಂಬ್ಲಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಎನ್‌ಸಿ ಶಾಸಕ

Pinterest LinkedIn Tumblr


ಹೊಸದಿಲ್ಲಿ: ನ್ಯಾಷನಲ್ ಕಾನ್ಫರೆನ್ಸ್‌ ಶಾಸಕ ಅಕ್ಬರ್‌ ಲೋನ್ ಜಮ್ಮು ಕಾಶ್ಮೀರ ವಿಧಾನಸಭೆಯಲ್ಲಿ ಶನಿವಾರ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ಭಾರೀ ಕೋಲಾಹಲಕ್ಕೆ ಕಾರಣವಾಯಿತು.

ಬಿಜೆಪಿ ಶಾಸಕರು ಪಾಕ್‌ ವಿರೋಧಿ ಘೋಷಣೆ ಕೂಗಿದಾಗ ತಮಗೆ ಪ್ರಚೋದನೆ ನೀಡಿದಂತಾಗಿ ಪಾಕ್ ಪರ ಘೋಷಣೆ ಕೂಗಿದ್ದಾಗಿ ನಂತರ ಲೋನ್‌ ಹೇಳಿಕೊಂಡರು.

‘ಹೌದು ನಾನು ಘೋಷಣೆ ಕೂಗಿದ್ದು ನಿಜ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಸದನದಲ್ಲಿ ಘೋಷಣೆ ಕೂಗಿರುವುದು ಬೇರೆಯವರಿಗೆ ಏಕೆ ಸಮಸ್ಯೆಯಾಗಬೇಕು?’ ಎಂದು ಲೋನ್‌ ಪ್ರಶ್ನಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಜಮ್ಮುವಿನಲ್ಲಿ ಶನಿವಾರ ಬೆಳಗಿನ ಜಾವ ಸುಂಜುವಾನ್‌ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಪಾಕ್ ವಿರೋಧಿ ಘೋಷಣೆ ಕೂಗಿದರು.

ಇದಕ್ಕೆ ಪ್ರತಿಯಾಗಿ ತಾನು ಪಾಕ್ ಪರ ಘೋಷಣೆ ಕೂಗಿದೆ ಎಂದು ಶಾಸಕ ಲೋನ್‌ ಹೇಳಿರುವುದು ಖಂಡಿತಾ ಸಮರ್ಥನೀಯವಲ್ಲ. ಅವರ ಘೋಷಣೆ ಮತ್ತು ಸಮರ್ಥನೆಯನ್ನು ಒಪ್ಪಲಾಗದು ಎಂದು ನ್ಯಾಷನಲ್ ಕಾನ್ಫರೆನ್ಸ್‌ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಖಂಡಿಸಿದ್ದಾರೆ.

‘ದಾರಿತಪ್ಪಿಸುವ’ ಘೋಷಣೆಗಳಿಗೆ ಪ್ರತಿಕ್ರಿಯಿಸುವ ಬದಲು ಸೇನಾಶಿಬಿರಕ್ಕೆ ದಾಳಿಯಿಟ್ಟ ಉಗ್ರರನ್ನು ಮಟ್ಟಹಾಕಲು ಗಮನ ಹರಿಸಬೇಕು ಎಂದು ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

‘ನನ್ನ ಪಕ್ಷದ ಅಧ್ಯಕ್ಷರ ಹೇಳಿಕೆಯನ್ನು ನಾನು ಸಂಪೂರ್ಣ ಬೆಂಬಲಿಸುತ್ತೇನೆ. ಇದಕ್ಕಿಂತ ಹೆಚ್ಚೇನೂ ಹೇಳಲಾರೆ’ ಎಂದು ಓಮರ್‌ ಟ್ವೀಟ್‌ ಮಾಡಿದ್ದಾರೆ.

ಭಯೋತ್ಪಾದನೆ ರಫ್ತು ಮಾಡುವುದನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಆಗ್ರಹಿಸಿರುವ ನ್ಯಾಷನಲ್ ಕಾನ್ಫರೆನ್ಸ್‌, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದೆ.

ಶನಿವಾರ ಬೆಳಗ್ಗೆ ಸುಜುವಾನ್‌ ಸೇನಾ ಶಿಬಿರದ ಮೇಲೆ ಜೈಷೆ ಮೊಹಮ್ಮದ್‌ ಉಗ್ರರು ದಾಳಿ ನಡೆಸಿದ್ದು ಇಬ್ಬರು ಯೋಧರು ಹುತಾತ್ಮರಾಗಿದ್ದರು. ಗುಂಡಿನ ಕಾಳಗ ಇನ್ನೂ ಮುಂದುವರಿದಿದೆ.

ಈ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಹಾಗೂ ವಿಧಾನಸಭೆ ಸ್ಪೀಕರ್‌ ಕವೀಂದರ್ ಗುಪ್ತಾ, ರಾಜ್ಯದಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಗಳ ಜನಸಂಖ್ಯೆ ಹೆಚ್ಚುತ್ತಿರುವುದು ಈ ದಾಳಿಗೆ ಪೂರಕವಾಗಿದೆ ಎಂದಿದ್ದರು.

Comments are closed.