ರಾಷ್ಟ್ರೀಯ

ವರದಕ್ಷಿಣೆ ತರದಕ್ಕೆ ಪತ್ನಿಯ ಕಿಡ್ನಿಯನ್ನೇ ಮಾರಿದ ಪತಿ ! ಚಾಲಾಕಿ ಪತಿ ಕಿಡ್ನಿ ತೆಗೆಸಿದ್ದೇಗೆ.?

Pinterest LinkedIn Tumblr

ಕೋಲ್ಕತ್ತಾ: ಪತಿಯೊಬ್ಬ ಪತ್ನಿ ತವರು ಮನೆಯಿಂದ ವರದಕ್ಷಿಣೆ ತರಲಿಲ್ಲ ಎಂದು ಆಕೆಯ ಕಿಡ್ನಿಯನ್ನು ಮಾರಾಟ ಮಾಡಿರುವ ವಿಚಿತ್ರ ಘಟನೆಯೊಂದು ಪಶ್ಚಿಮ ಬಂಗಾಳ ರಾಜ್ಯದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

28 ವರ್ಷದ ರಿಟಾ ಸರ್ಕಾರ್ ಕಿಡ್ನಿ ಕಳೆದುಕೊಂಡ ಪತ್ನಿ. ರಿಟಾ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ರಿಟಾ ಪತಿ ಮತ್ತು ಬಾಮೈದನನ್ನು ಬಂಧಿಸಿದ್ದಾರೆ. 12 ವರ್ಷಗಳ ಹಿಂದೆ ಬಿಸ್ವಜಿತ್ ಸರ್ಕಾರ್ ಎಂಬಾತನೊಂದಿಗೆ ರಿಟಾ ಅವರ ಮದುವೆಯಾಗಿತ್ತು. ಮದುವೆ ಬಳಿಕ ಪತಿ ಮತ್ತು ಮಾವ ವರದಕ್ಷಿಣೆ ತರುವಂತೆ ಪ್ರತಿನಿತ್ಯ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು.

ಕಿಡ್ನಿ ಮಾರಾಟ ಮಾಡಿದ್ದು ಹೇಗೆ?: ಎರಡು ವರ್ಷಗಳ ಹಿಂದೆ ರಿಟಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ವೇಳೆ ರಿಟಾ ಪತಿ ಕೊಲ್ಕತ್ತಾದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ರು. ವೈದ್ಯರು ರಿಟಾ ಅಪೆಂಡಿಕ್ಸ್ ನಿಂದ ಬಳಲುತ್ತಿದ್ದಾರೆ ಎಂದು ಪತಿಗೆ ತಿಳಿಸಿದ್ದಾರೆ. ಇದೇ ಸಮಯವನ್ನು ದುರುಪಯೋಗ ಮಾಡಿಕೊಂಡ ರಿಟಾ ಪತಿ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರೊಂದಿಗೆ ಸೇರಿಕೊಂಡು ಪತ್ನಿಯ ಕಿಡ್ನಿ ತೆಗೆದು ಮಾರಾಟ ಮಾಡಿದ್ದಾನೆ.

ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆ ಬಳಿಕ ರಿಟಾ ನೋವಿನಿಂದ ಬಳಲುತ್ತಿದ್ದರು. ಆದ್ರೆ ಪತಿರಾಯ ಮಾತ್ರ ಕೋಲ್ಕತ್ತಾದಲ್ಲಿ ಸರ್ಜರಿ ನಡೆದಿರುವ ಬಗ್ಗೆ ಯಾರಿಗೂ ಹೇಳದಂತೆ ಪತ್ನಿಗೆ ಎಚ್ಚರಿಕೆ ಕೊಟ್ಟಿದ್ದ. ರಿಟಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೂ ನಿರ್ಲಕ್ಷ್ಯ ಮಾಡಿದ್ದ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಿಟಾರನ್ನು ನೋಡಿದ ಪೋಷಕರು ಉತ್ತರ ಬಂಗಾಲ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ರಿಟಾರನ್ನು ಪರೀಶಿಲಿಸಿದ ವೈದ್ಯರು ಒಂದು ಕಿಡ್ನಿ ಇಲ್ಲವೆಂಬ ವಿಷಯ ತಿಳಿಸಿದ್ದಾರೆ. ಅಲ್ಲಿಂದ ಹಿಂದಿರುಗಿ ಬಂದ ರಿಟಾ ಮಲಡಾದಲ್ಲಿರುವ ನರ್ಸಿಂಗ್ ಹೋಮ್ ನ ವೈದ್ಯರ ಭೇಟಿಯಾಗಿದ್ದಾರೆ. ಈ ವೇಳೆ ವೈದುರು ಒಂದು ಕಿಡ್ನಿ ಮಾತ್ರ ತೆಗೆಯಲಾಗಿದ್ದು, ಪ್ರಾಣಾಪಾಯವೇನಿಲ್ಲ ಎಂಬ ಸಲಹೆ ನೀಡಿದ್ದಾರೆ.

ನನ್ನ ದೇಹದಿಂದ ಕಿಡ್ನಿ ತೆಗೆದಿದ್ದು ಹೇಗೆ ಎಂಬುದನ್ನು ಯೋಚಿಸಿದಾಗ ಎರಡು ವರ್ಷಗಳ ಹಿಂದೆ ನಡೆದಿರುವ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆಯ ನೆನಪಾಯಿತು. ಚಿಕಿತ್ಸೆಯ ಬಳಿಕ ಪತಿಯ ವರ್ತನೆ, ಶಸ್ತ್ರ ಚಿಕಿತ್ಸೆ ನಡೆದಿರುವ ಬಗ್ಗೆ ಯಾರಿಗೂ ಹೇಳದಂತೆ ನೀಡಿದ್ದ ಎಲ್ಲ ಎಚ್ಚರಿಕೆಯ ಮಾತುಗಳು ಅನುಮಾನ ಮೂಡಿಸಿದವು ಎಂದು ರಿಟಾ ಹೇಳಿದ್ದಾರೆ.

ಪತಿ ವಿರುದ್ಧ ದೂರು: ತನ್ನ ಕಿಡ್ನಿ ಕಳ್ಳತನ ಆಗಿದ್ದರ ಬಗ್ಗೆ ರಿಟಾ ತನ್ನ ಪೋಷಕರ ಸಹಾಯದೊಂದಿಗೆ ಉತ್ತರ ಬಂಗಾಳದ ಫರಕ್ಕ ಪೊಲೀಸ್ ಠಾಣೆಯಲ್ಲಿ ಪತಿ, ಮಾವ, ಅತ್ತೆ ಮತ್ತು ಬಾಮೈದನ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ್ವಯ ಮುರ್ಷಿದಾಬಾದ್ ನಗರದಲ್ಲಿ ಬಟ್ಟೆ ವ್ಯಾಪಾರಿಯಾಗಿರುವ ರಿಟಾ ಪತಿ ಬಿಸ್ವಜಿತ್ ಸರ್ಕಾರ್ ಮತ್ತು ಬಾಮೈದ ಶ್ಯಾಮಲ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ರಿಟಾ ಅತ್ತೆ ಬುಲ್‍ರಾಣಿ ಮತ್ತು ಮಾವ ಎಸ್ಕೇಪ್ ಆಗಿದ್ದಾರೆ.

ತಪ್ಪೊಪ್ಪಿಕೊಂಡ ಪತಿ: ಪೊಲೀಸ್ ವಿಚಾರಣೆ ವೇಳೆ ಬಿಸ್ವಜಿತ್ ಪತ್ನಿಯ ಕಿಡ್ನಿಯನ್ನು ಛತ್ತೀಸ್‍ಘಢ ರಾಜ್ಯದ ಉದ್ಯಮಿಯೊಬ್ಬರಿಗೆ ಮಾರಿಕೊಂಡಿದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ರಿಟಾ ಸರ್ಜರಿ ನಡೆದಿರುವ ಖಾಸಗಿ ಆಸ್ಪತ್ರೆಯ ಮೇಲೆ ಪೊಲೀಸರು ದಾಳಿ ನಡೆಸಲಾಗಿದೆ ಎಂದು ಫರಕ್ಕ ಠಾಣೆಯ ಹೆಸರು ಹೇಳಲು ಇಚ್ಚಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತನಿಖೆಗೆ ವಿಶೇಷ ಟೀಂ: ಕಿಡ್ನಿ ಸಮಗಲಿಂಗ್ ಗ್ಯಾಂಗ್‍ವೊಂದು ನಗರದಲ್ಲಿ ಈ ರೀತಿಯ ಚಟುವಟಿಕೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಕಿಡ್ನಿ ದಂಧೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲು ವಿಶೇಷ ಟೀಮ್ ರಚನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ರಿಟಾ 2005ರಲ್ಲಿ ಬಿಸ್ವಜಿತ್ ನೊಂದಿಗೆ ಮದುವೆಯಾಗಿದ್ದು, ವರದಕ್ಷಿಣೆ ಹಣಕ್ಕಾಗಿ ಪತಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ. ರಿಟಾ ಮತ್ತು ಬಸ್ವಜಿತ್‍ಗೆ 11 ವರ್ಷದ ಒಬ್ಬ ಮಗನು ಇದ್ದಾನೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 19(ಹಣಕ್ಕಾಗಿ ಮಾನವ ಅಂಗಗಳ ಮಾರಾಟ), ಸೆಕ್ಷನ್ 21 (ಹಣಕ್ಕಾಗಿ ಅಂಗಗಳ ಮಾರಾಟ ಕಾನೂನು ಉಲ್ಲಂಘನೆ), ಸೆಕ್ಷನ್ 307 (ಕೊಲೆಗೆ ಯತ್ನ) ಮತ್ತು ಸೆಕ್ಷನ್ 498(ವಿವಾಹಿತ ಮಹಿಳೆಯ ಅಸಹಾಯಕತೆಯ ದುರುಪಯೋಗ) ಅನ್ವಯ ಪ್ರಕರಣ ದಾಖಲಾಗಿದೆ.

Comments are closed.