ರಾಷ್ಟ್ರೀಯ

ಮಾಲ್ಢೀವ್ಸ್‌ ಬಿಕ್ಕಟ್ಟು: ಯಾವುದೇ ಕ್ಷಣ ಕಾರ್ಯಾಚರಣೆಗೆ ಭಾರತೀಯ ಸೇನೆ ಸನ್ನದ್ಧ

Pinterest LinkedIn Tumblr

ಹೊಸದಿಲ್ಲಿ: ಗಂಭೀರ ಬಿಕ್ಕಟ್ಟಿನತ್ತ ಸಾಗಿರುವ ಮಾಲ್ಡೀವ್ಸ್‌ನಿಂದ ಭಾರತೀಯ ಪ್ರವಾಸಿಗರನ್ನು ತೆರವುಗೊಳಿಸಲು ಭಾರತೀಯ ಸಶಸ್ತ್ರ ಪಡೆಗಳು ಸಜ್ಜಾಗಿವೆ. ಆದರೆ ಕಾರ್ಯಾಚರಣೆ ಆರಂಭಿಸುವಂತೆ ಇದುವರೆಗೂ ಯಾವುದೇ ರಾಜಕೀಯ ನಿರ್ದೇಶನಗಳು ಬಂದಿಲ್ಲ.

ಮಾಲ್ಡೀವ್ಸ್‌ನ ಬೆಳವಣಿಗೆಗಳ ಮೇಲೆ ಸಶಸ್ತ್ರ ಪಡೆಗಳು ನಿಕಟ ನಿಗಾ ಇರಿಸಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿವೆ. ಅಲ್ಲದೆ ಕ್ಷಿಪ್ರ ಸೂಚನೆ ಮೇರೆಗೆ ನಿಯೋಜನೆಗೂ ಸಿದ್ಧವಾಗಿವೆ.

ಪಶ್ಚಿಮ ಸಮುದ್ರದಲ್ಲಿ ಭಾರತೀಯ ನೌಕಾಪಡೆಯ ಎರಡು ಗಸ್ತು ನೌಕೆಗಳು ಸದಾ ಕಾರ್ಯನಿರತವಾಗಿದ್ದು, ಅಗತ್ಯವೆನಿಸಿದರೆ ಮಾಲ್ಡೀವ್ಸ್‌ನತ್ತ ತೆರಳಲು ಸಿದ್ಧವಾಗಿವೆ.

‘ಮಾಲ್ಡೀವ್ಸ್‌ನಲ್ಲಿ ರಕ್ಷಣಾ ಸಹಕಾರ ಒಪ್ಪಂದದ ಅನ್ವಯ ಭಾರತದ ಕೆಲವು ರಕ್ಷಣಾ ಸಿಬ್ಬಂದಿಗಳೂ ಇದ್ದಾರೆ. ನಮ್ಮ ಯುದ್ಧನೌಕೆಗಳು, ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಆಗಾಗ್ಗೆ ಮಾಲ್ಡೀವ್ಸ್‌ನ ವಿಶೇಷ ಆರ್ಥಿಕ ವಲಯದ ಮೇಲೆ ಗಸ್ತು ನಡೆಸುತ್ತವೆ’ ಎಂದು ಮೂಲವೊಂದು ತಿಳಿಸಿದೆ.

ಮಾಲ್ಡೀವ್ಸ್‌ನಲ್ಲಿ ಕರಾವಳಿ ಕಣ್ಗಾವಲು ರಾಡಾರ್ ಸಿಸ್ಟಂ (CSRS) ಕೇಂದ್ರಗಳ ಸ್ಥಾಪನೆಗೆ ಭಾರತ ನೆರವಾಗುತ್ತಿದೆ. ತುರ್ತು ಸನ್ನಿವೇಶ ಉದ್ಭವಿಸಿದರೆ, ನಿರ್ದಿಷ್ಟ ಸಂಖ್ಯೆಯ ಸೈನಿಕರು, ಯುದ್ಧ ನೌಕೆಗಳು ಮತ್ತು ವಿಮಾನಗಳು ಕಾರ್ಯಾಚರಣೆಗೆ ಸನ್ನದ್ಧವಾಗಿವೆ.

ವಾಯುಪಡೆಯ ಸಿ-130ಜೆ ‘ಸೂಪರ್‌ ಹರ್ಕ್ಯುಲಸ್‌’ ಮತ್ತು ಸಿ-17 ಗ್ಲೋಬ್‌ ಮಾಸ್ಟರ್‌-3 ವಿಮಾನಗಳು ತುರ್ತಾಗಿ ರಕ್ಷಣಾ ಸಾಮಗ್ರಿಗಳು ಮತ್ತು ಯುದ್ಧ ಸನ್ನದ್ಧ ಯೋಧರನ್ನು ಸಾಗಿಸಲು ಸಜ್ಜಾಗಿವೆ. ಸಣ್ಣ ರನ್‌ವೇಗಳಲ್ಲೂ ಇಳಿಯಲು ಸಾಧ್ಯವಿರುವ ನಾಲ್ಕು ಎಂಜಿನ್‌ಗಳ ಸಿ-17 ವಿಮಾನಗಳು ಒಂದೇ ಹಾರಾಟದಲ್ಲಿ 70 ಟನ್‌ ಲೋಡ್‌ ಹೊತ್ತು 4,200 ಕಿ.ಮೀ ದೂರ ಹಾರುವ ಸಾಮರ್ಥ್ಯ ಹೊಂದಿವೆ. ಸಿ-130ಜೆ ವಿಮಾನಗಳು 20 ಟನ್‌ ತೂಕದ ಲೋಡ್‌ಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿವೆ.

ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ಮಾಲ್ಡೀವ್ಸ್‌ಗೆ ನೆರವು ನೀಡಲು ಭಾರತ ಸದಾ ಮುಂದಾಗುತ್ತದೆ. ಉದಾಹರಣೆಗೆ, 1988ರಲ್ಲಿ ಮಾಲ್ದೀವ್ಸ್‌ನ ಆಗಿನ ಅಧ್ಕಕ್ಷ ಅಬ್ದುಲ್‌ ಗಯೂಮ್‌ ಸರಕಾರದ ವಿರುದ್ಧ ಅಬ್ದುಲ್ಲಾ ಲಥೂಫಿ ನೇತೃತ್ವದ ಗುಂಪೊಂದು ದಂಗೆ ಎದ್ದಾಗ ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಭಾರತೀಯ ಸೇನೆಯನ್ನು ಕಳುಹಿಸಿ ದಂಗೆಯನ್ನು ಹತ್ತಿಕ್ಕಿದ್ದರು. ಆಗ ದಂಗೆಯೆದ್ದ ಗುಂಪಿಗೆ ಲಂಕಾದ 60 ಮಂದಿ ಸಶಸ್ತ್ರ ತಮಿಳು ಪ್ರತ್ಯೇಕತಾವಾದಿಗಳ ಬೆಂಬಲವಿತ್ತು.

Comments are closed.