ರಾಷ್ಟ್ರೀಯ

ಗಾಂಜಾ ಗಿಡದ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡವನ ಪಾಡು ಏನಾಯ್ತು ಗೊತ್ತೆ?

Pinterest LinkedIn Tumblr


ಚೆನ್ನೈ: ನೀವು ಕ್ಲಿಕ್ಕಿಸಿಕೊಂಡ ಸೆಲ್ಫಿ ಕೂಡ ನಿಮ್ಮನ್ನು ಕಂಬಿ ಹಿಂದೆ ನಿಲ್ಲಿಸುತ್ತೆ ಜೋಕೆ. ಹೌದು ಮನೆಯ ಟೆರೇಸ್ ಮೇಲೆ ತಾನೇ ಬೆಳೆದಿದ್ದ ಹಸಿರು ಗಿಡದ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ವ್ಯಕ್ತಿಯೋರ್ವ ಜೈಲು ಪಾಲಾಗಿದ್ದಾನೆ. ಕಾರಣ ಆತ ಬೆಳೆದಿದ್ದು ನಿಷೇಧಿತ ಗಾಂಜಾ ಗಿಡ.

ನಿಲಮ್ ಬಾಷಾ ದರ್ಗಾ ಸ್ಟ್ರೀಟ್‌ನ ಕಮಲ್ (35) ಬಂಧಿತ ವ್ಯಕ್ತಿ. ಫೋಟೋ ಕ್ಲಿಕ್ಕಿಸಿ ಜಾಲತಾಣಗಳಲ್ಲಿ ಹರಿಬಿಟ್ಟ ವಿಎಂ ಸ್ಟ್ರೀಟ್‌ನ ಶಶಿಕುಮಾರ್ (22) ಎಂಬಾತನನ್ನೂ ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಂಜಾ ಗಿಡದ ಜತೆ ತೆಗೆದುಕೊಂಡ ಸೆಲ್ಫಿ ಚಿತ್ರ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದೆ.

ಗಾಂಜಾ ಬೆಳೆದ ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಕಾಂಚಿಪುರಂ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ನಗರದ ಗಾಂಧಿ ರಸ್ತೆಯಲ್ಲಿರುವ ವಝಕ್ಕು ತೀರ್ಥ ಈಶ್ವರನ್‌ ದೇವಾಲಯದ ಬಯಲು ಪ್ರದೇಶದಲ್ಲಿ ಗಾಂಜಾ ಗಿಡ ಬೆಳೆಯುತ್ತಿದ್ದ ಮೂರ್ತಿ (55) ಬಂಧಿತ ಆರೋಪಿ. ಈ ಪ್ರಸಿದ್ಧ ದೇವಾಲಯಕ್ಕೆ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೇರಿದಂತೆ ಹಲವು ರಾಜಕಾರಣಿಗಳು ಭೇಟಿ ನೀಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Comments are closed.