
ನವದೆಹಲಿ: ಭಾರತದಲ್ಲಿ ಸಂಪ್ರದಾಯವಾದಿ ಧಾರ್ಮಿಕ ಸಿದ್ಧಾಂತಗಳು ಏರಿಕೆಯಾಗುತ್ತಿರುವುದರ ನಡುವೆಯೇ ಇಐಯು ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತ 42 ನೇ ಸ್ಥಾನಕ್ಕೆ ಕುಸಿದಿದೆ.
ದಲಿತರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು ಎಕಾನಾಮಿಸ್ಟ್ ಇಂಟಲಿಜೆನ್ಸ್ ಯುನಿಟ್ (ಇಐಯು) ಪ್ರಕಾರ ಭಾರತದ ಪ್ರಜಾಪ್ರಭುತ್ವ ಸೂಚ್ಯಂಕ 32 ರಿಂದ 42 ನೇ ಸ್ಥಾನಕ್ಕೆ ಕುಸಿದಿದೆ. ನಾರ್ವೇ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ್ದು, ಐಲ್ಯಾಂಡ್, ಸ್ವೀಡನ್ ನಂತರದ ಸ್ಥಾನಗಳಲ್ಲಿವೆ.
ಚುನಾವಣಾ ಪ್ರಕ್ರಿಯೆ ಮತ್ತು ಬಹುಸಂಖ್ಯಾತತೆ, ನಾಗರಿಕ ಸ್ವಾತಂತ್ರ್ಯಗಳು, ಸರ್ಕಾರದ ಕಾರ್ಯನಿರ್ವಹಣೆ, ರಾಜಕೀಯ ಭಾಗವಹಿಸುವಿಕೆ ಮತ್ತು ರಾಜಕೀಯ ಸಂಸ್ಕೃತಿ ಆಧಾರದಲ್ಲಿ ಸೂಚ್ಯಂಕವನ್ನು ನಿರ್ಧರಿಸಲಾಗಿದ್ದು, ಸಂಪೂರ್ಣ ಪ್ರಜಾಪ್ರಭುತ್ವ, ದೋಷಪೂರಿತ ಪ್ರಜಾಪ್ರಭುತ್ವ, ಹೈಬ್ರಿಡ್ ಆಡಳಿತ ಮತ್ತು ನಿರಂಕುಶ ಆಡಳಿತ ಎಂಬ ನಾಲ್ಕು ವಿಭಾಗಗಳಲ್ಲಿ ರಾಷ್ಟ್ರಗಳನ್ನು ಪಟ್ಟಿ ಮಾಡಲಾಗಿದೆ, 165 ರಾಷ್ಟ್ರಗಳನ್ನು ಈ ನಾಲ್ಕು ವಿಭಾಗಗಳ ಪಟ್ಟಿಯಡಿಲ್ಲಿ ವರ್ಗೀಕರಿಸಲಾಗಿದ್ದು ಭಾರತ ದೋಷಪೂರಿತ ಪ್ರಜಾಪ್ರಭುತ್ವದ ವರ್ಗದಲ್ಲಿ ಗುರುತಿಸಿಕೊಂಡಿದೆ.
21 ನೇ ಸ್ಥಾನದಲ್ಲಿರುವ ಅಮೆರಿಕ, ಜಪಾನ್, ಇಟಾಲಿ, ಫ್ರಾನ್ಸ್, ಇಸ್ರೇಲ್, ಸಿಂಗಪೂರ್, ಹಾಂಕ್ ಕಾಂಗ್ ಸಹ ದೋಷಪೂರಿತ ಪ್ರಜಾಪ್ರಭುತ್ವದ ಸಾಲಿನಲ್ಲೇ ಗುರುತಿಸಿಕೊಂಡಿದ್ದು, ಬ್ರಿಟನ್ ಮೂಲದ ಎಕಾನಾಮಿಸ್ಟ್ ಗ್ರೂಪ್ ನ ವಿಶ್ಲೇಷಣೆ ಹಾಗೂ ಸಂಶೋಧನಾ ವಿಭಾಗ ಇಐಯು ಆಗಿದೆ.
Comments are closed.