ಹೊಸದಿಲ್ಲಿ: ಉದ್ಯೋಗಾವಕಾಶ ಸೃಷ್ಟಿ ಕುರಿತು ಪ್ರಧಾನಿ ಮೋದಿ ಅವರ ‘ಪಕೋಡ’ ಹೇಳಿಕೆಗೆ ಟಾಂಗ್ ನೀಡಿರುವ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಅವರು, ಭಿಕ್ಷಾಟನೆಯನ್ನೂ ಉದ್ಯೋಗ ಎಂದು ಪರಿಗಣಿಸುವಂತೆ ಕುಹಕವಾಡಿದ್ದಾರೆ.
ಉದ್ಯೋಗ ಸೃಷ್ಟಿ ಸಂಬಂಧ ಕೇಂದ್ರ ಸರಕಾರವನ್ನು ಟ್ವಿಟರ್ ಮೂಲಕ ತರಾಟೆಗೆ ತೆಗೆದುಕೊಂಡಿರುವ ಅವರು, ಭಾರತದ ಆರ್ಥಿಕತೆಯು ‘ಉದ್ಯೋಗ ರಹಿತ’ ಪ್ರಗತಿಗೆ ಸಾಕ್ಷಿಯಾಗುತ್ತಿದ್ದು, ಉದ್ಯೋಗ ಸೃಷ್ಟಿ ಹೇಗೆ ಎಂಬುದು ಸರಕಾರಕ್ಕೇ ತಿಳಿಯುತ್ತಿಲ್ಲ ಎಂದಿದ್ದಾರೆ.
”ಪ್ರಧಾನಿ ಮೋದಿ ಅವರು ಪಕೋಡಾ ಮಾರುವುದು ಸಹ ಉದ್ಯೋಗ ಎಂದು ಹೇಳಿದ್ದಾರೆ. ಹಾಗಾದರೆ, ತಾರ್ಕಿಕವಾಗಿ ನೋಡಿದರೆ ಭಿಕ್ಷೆ ಬೇಡುವುದು ಸಹ ಉದ್ಯೋಗವೇ ಆಗುತ್ತದೆ. ಹಾಗಾಗಿ ಅನಿವಾರ್ಯವಾಗಿ ಭಿಕ್ಷಾಟನೆ ನಡೆಸುತ್ತಿರುವ ಬಡವರು ಅಥವಾ ವಿಕಲ ಚೇತನರನ್ನು ‘ಉದ್ಯೋಗಿಗಳು’ ಎಂದು ಪರಿಗಣಿಸೋಣ ಬಿಡಿ,” ಎಂದು ಚಿದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ”ಪಕೋಡಾ ಮಾರುವ ವ್ಯಕ್ತಿ ದಿನಕ್ಕೆ 200 ರೂ. ಗಳಿಸಿದರೆ ಅದೂ ಸಹ ಉದ್ಯೋಗವಲ್ಲವೇ?” ಎಂದಿದ್ದರು.