ರಾಷ್ಟ್ರೀಯ

ರಾಜಕೀಯ ಪಕ್ಷಗಳಿಗೆ 2,000 ರೂ.ಗಳಿಗಿಂತ ಹೆಚ್ಚು ನಗದು ದೇಣಿಗೆ ನೀಡಬೇಡಿ: ಐಟಿ ಇಲಾಖೆ ಸೂಚನೆ

Pinterest LinkedIn Tumblr
An

ಹೊಸದಿಲ್ಲಿ: ರಾಜಕೀಯ ಪಕ್ಷಗಳಿಗೆ 2,000 ರೂ.ಗಳಿಗಿಂತ ಹೆಚ್ಚಿನ ಮೊತ್ತವನ್ನು ನಗದು ಹಣವನ್ನು ದೇಣಿಗೆಯಾಗಿ ನೀಡದಿರಿ ಎಂದು ಆದಾಯ ತೆರಿಗೆ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಸಿದೆ.

ಚುನಾವಣೆ ದೇಣಿಗೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಸರಕಾರ ಈ ವರ್ಷದ ಆರಂಭದಲ್ಲೇ ‘ಚುನಾವಣಾ ಬಾಂಡ್‌’ಗಳನ್ನು ಪರಿಚಯಿಸಿತ್ತು. ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ನಿರ್ದಿಷ್ಟ ಶಾಖೆಗಳಲ್ಲಿ ಇಂತಹ ಬಾಂಡ್‌ಗಳನ್ನು ಖರೀದಿಸಿ ಪಕ್ಷಗಳಿಗೆ ದೇಣಿಗೆ ನೀಡಬಹುದಾಗಿದೆ.

ಈ ಯೋಜನೆ ಅನ್ವಯ, ಒಬ್ಬ ವ್ಯಕ್ತಿ ಒಂದು ರಾಜಕೀಯ ಪಕ್ಷಕ್ಕೆ 2,000 ರೂ.ಗಳಿಗಿಂತ ಹೆಚ್ಚಿನ ದೇಣಿಗೆ ನೀಡುವಂತಿಲ್ಲ. ತೆರಿಗೆ ಇಲಾಖೆ ಈ ಕುರಿತು ಪ್ರಮುಖ ದೈನಿಕಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಿದ್ದು, ‘ಒಬ್ಬ ವ್ಯಕ್ತಿ ಒಂದು ನೋಂದಾಯಿತ ಟ್ರಸ್ಟ್‌ ಅಥವಾ ರಾಜಕೀಯ ಪಕ್ಷಕ್ಕೆ ನೀಡುವ ನಗದು ದೇಣಿಗೆ ಮೊತ್ತ 2,000 ರೂ.ಗಳಿಗೆ ಮೀರುವಂತಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಸರಕಾರ ಚುನಾವಣೆ ಬಾಂಡ್‌ಗಳ ಕುರಿತ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಈ ಸಲಹೆ ನೀಡಿದೆ.

ಮಾಡಬಹುದಾದ ಮತ್ತು ಮಾಡಬಾರದ (DOs and Dont’s) ಇನ್ನೂ ಹಲವು ವಿಷಯಗಳನ್ನು ಐಟಿ ಇಲಾಖೆ ಪಟ್ಟಿ ಮಾಡಿದೆ.

* ಒಬ್ಬ ವ್ಯಕ್ತಿಯಿಂದ ಒಂದು ದಿನದಲ್ಲಿ ಒಂದು ಅಥವಾ ಹೆಚ್ಚು ವಹಿವಾಟುಗಳ ಮೂಲಕ, ಒಂದೇ ಘಟನೆ ಅಥವಾ ಸಂದರ್ಭಕ್ಕೆ ಸಂಬಂಧಿಸಿದಂತೆ 2 ಲಕ್ಷ ರೂ ಅಥವಾ ಅದಕ್ಕೂ ಹೆಚ್ಚಿನ ಮೊತ್ತದ ನಗದು ಹಣ ಸ್ವೀಕರಿಸುವಂತಿಲ್ಲ.

* ಸ್ಥಿರಾಸ್ತಿಯ ವರ್ಗಾವಣೆಗಾಗಿ 20,000 ರೂ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನಗದನ್ನು ಪಾವತಿಸುವ / ಸ್ವೀಕರಿಸುವಂತಿಲ್ಲ.

* ವ್ಯವಹಾರ ಅಥವಾ ವೃತ್ತಿಗೆ ಸಂಬಂಧಿಸಿದಂತೆ 10,000 ರೂ.ಗಳಿಗಿಂತ ಹೆಚ್ಚು ಮೊತ್ತದ ನಗದು ಪಾವತಿಸುವಂತಿಲ್ಲ.

ಈ ಎಲ್ಲ ಬಗೆಯ ವಹಿವಾಟುಗಳಲ್ಲಿ ‘ನಗದು ವ್ಯವಹಾರ’ವನ್ನು ಸಾರ್ವಜನಿಕರು ನಿರಾಕರಿಸಬೇಕು ಎಂದು ತೆರಿಗೆ ಅಧಿಕಾರಿಗಳು ಸೂಚಿಸಿದ್ದಾರೆ. ‘ಈ ಮಿತಿಗಿಂತ ಹೆಚ್ಚಿನ ನಗದು ವ್ಯವಹಾರ ನಡೆಸಿದರೆ ತೆರಿಗೆ ಅಥವಾ ದಂಡ ಪಾವತಿಸಬೇಕಾಗಬಹುದು’ ಎಂದೂ ಎಚ್ಚರಿಸಿದ್ದಾರೆ.

‘ನಗದು ರಹಿತ ವ್ಯವಹಾರ ಮಾಡಿ, ಸ್ವಚ್ಛ ವಹಿವಾಟು ನಡೆಸಿ’ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆ.

ಯಾವುದೇ ರೀತಿಯ ಕಾಳಧನ ಅಥವಾ ಬೇನಾಮಿ ಆಸ್ತಿಗಳ ವ್ಯವಹಾರ ನಡೆಯುವುದು ಕಂಡುಬಂದಲ್ಲಿ “mailto:blackmoneyinfo@incometax.gov.in”\nblackmoneyinfo@incom etax.gov.in ಈ ವಿಳಾಸಕ್ಕೆ ಇ-ಮೇಲ್‌ ಮಾಡುವಂತೆ ಅಥವಾ ಇಲಾಖೆಯ ಪ್ರಧಾನ ಆಯುಕ್ತರಿಗೆ ದೂರು ಸಲ್ಲಿಸುವಂತೆ ಇಲಾಖೆ ಸೂಚಿಸಿದೆ.

ರಾಜಕೀಯ ಪಕ್ಷಗಳಿಗೆ ಬೇನಾಮಿ ಹಾಗೂ ಕಾಳಧನ ದೇಣಿಗೆಗಳ ಹರಿವನ್ನು ತಡೆಯುವುದಕ್ಕಾಗಿ ‘ಚುನಾವಣೆ ಬಾಂಡ್‌’ಗಳನ್ನು ಜಾರಿಗೆ ತರಲಾಗಿದೆ. ಜನವರಿ, ಏಪ್ರಿಲ್‌, ಜುಲೈ ಮತ್ತು ಅಕ್ಟೋಬರ್‌ ತಿಂಗಳುಗಳ ಮೊದಲ 10 ದಿನಗಳಂದು ಎಸ್‌ಬಿಐನ ನಿರ್ದಿಷ್ಟ ಶಾಖೆಗಳಲ್ಲಿ ಚುನಾವಣೆ ಬಾಂಡ್‌ಗಳು ಲಭ್ಯವಿರುತ್ತವೆ.

ಈ ಬಾಂಡ್‌ಗಳಿಗೆ 15 ದಿನಗಳ ವಾಯಿದೆಯಿದ್ದು, ದೇಣಿಗೆ ನೀಡಿದವರ ಹೆಸರು, ಖರೀದಿದಾರನ ಹೆಸರು ಹೊಂದಿರುವುದಿಲ್ಲ. ಖರೀದಿದಾರರು ಬ್ಯಾಂಕ್‌ನಲ್ಲಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯವಾಗಿದ್ದರೂ ಬಾಂಡ್‌ಗಳ ಮೇಲೆ ಹೆಸರು ನಮೂದಾಗುವುದಿಲ್ಲ.

Comments are closed.