ರಾಷ್ಟ್ರೀಯ

1 ನೇ ತರಗತಿ ವಿದ್ಯಾರ್ಥಿಯನ್ನು ಚಾಕುವಿನಿಂದ ಇರಿದ 6ನೇ ತರಗತಿ ವಿದ್ಯಾರ್ಥಿನಿ

Pinterest LinkedIn Tumblr


ಲಖನೌ: ರೆಯಾನ್‌ ಶಾಲೆಯ ಪ್ರದ್ಯುಮ್ನ ಕೊಲೆ ಪ್ರಕರಣವನ್ನೇ ಹೋಲುವಂತಹ ಮತ್ತೊಂದು ಪ್ರಕರಣದಲ್ಲಿ ಒಂದನೇ ತರಗತಿ ವಿದ್ಯಾರ್ಥಿಯ ಮೇಲೆ ಆರನೇ ತರಗತಿ ವಿದ್ಯಾರ್ಥಿನಿ ಶಾಲೆಯ ಶೌಚಾಲಯದಲ್ಲಿ ಚಾಕುವಿನಿಂದ ಇರಿದಿದ್ದು, ಪ್ರಕರಣ ಸಂಬಂಧ ಶಾಲೆಯ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದಾರೆ.

ಆರು ವರ್ಷದ ಬಾಲಕನ ಎದೆ ಮತ್ತು ಹೊಟ್ಟೆಗೆ ಗಂಭೀರವಾಗಿ ಗಾಯವಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಂಗಳವಾರ ಈ ಘಟನೆ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ. ಸುದ್ದಿ ತಿಳಿದ ಶಾಲೆ ಆಡಳಿತ ಮಂಡಳಿ ಬ್ಲೂ ಗೇಮ್‌ನ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಬಾಲಕನ ಮೇಲೆ ಚೂಪಾದ ಚಾಕುವಿನಿಂದ ದಾಳಿ ನಡೆದಿರುವ ಕುರಿತು ವೈದ್ಯರು ಸ್ಪಷ್ಟಪಡಿಸಿದ್ದು,ಆಸ್ಪತ್ರೆಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಭೇಟಿ ಪರಿಶೀಲಿಸಿದರು.

ಲಖನೌ ಎಸ್‌ಎಸ್‌ಪಿ ದೀಪಕ್‌ ಕುಮಾರ್‌ ಪ್ರತಿಕ್ರಿಯಿಸಿ, ವಿದ್ಯಾರ್ಥಿನಿ ಆತನನ್ನು ಶಿಕ್ಷಕರು ಕರೆಯುತ್ತಿದ್ದಾರೆ ಎಂದು ಹೇಳಿ ಶೌಚಾಲಯಕ್ಕೆ ಕರೆದೊಯ್ದು ಕಪಾಳಕ್ಕೆ ಹೊಡೆದಿದ್ದಾಳೆ. ಬಳಿಕ ತರಕಾರಿ ಕತ್ತರಿಸುವ ಚಾಕುವಿನಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಬಾಲಕ ಹೇಳಿಕೆ ನೀಡಿದ್ದಾನೆ.

ಬಾಲಕನ ದೇಹದ ಬಳಿ ದೊರೆತಿರುವ ಕೂದಲನ್ನು ಡಿಎನ್‌ಎ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯಕ್ಕೆ ಆರನೇ ತರಗತಿ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದಿದ್ದು, ಬಾಲಾಪರಾಧ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Comments are closed.