ರಾಷ್ಟ್ರೀಯ

ಫುಟ್ಬಾಲ್ ಕನಸು ಹೊತ್ತುಕೊಂಡು ಬಂದ ಘಾನಾ ಫುಟ್ಬಾಲಿಗರಿಗೆ ಭಾರತದಲ್ಲಿ ವಂಚನೆ!

Pinterest LinkedIn Tumblr


ಕೋಲ್ಕತ್ತಾ: ವಿಶ್ವ ಫುಟ್ಬಾಲ್ ಗಮನಿಸಿದಾಗ ಭಾರತ ಕ್ಷಿಪ್ರ ಗತಿಯಲ್ಲಿ ಬೆಳೆದು ಬರುತ್ತಿದೆ. ಅತ್ತ ವಿದೇಶಿ ಆಟಗಾರರು ಸಹ ಉಜ್ವಲ ಭವಿಷ್ಯದ ಆಕಾಂಕ್ಷೆಯೊಂದಿಗೆ ದೇಶಕ್ಕೆ ಬರುತ್ತಾರೆ. ಆದರೆ ವಿಶ್ವದ ಜನಪ್ರಿಯ ಫುಟ್ಬಾಲ್ ರಾಷ್ಟ್ರದಲ್ಲಿ ವಂಚನೆ ಎದುರಾದರೆ ಹೇಗೆ ?

ಫುಟ್ಬಾಲ್ ಪ್ರಿಯ ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ಇಂತಹದೊಂದು ವರದಿ ಬಂದಿದೆ. ಫುಟ್ಬಾಲ್ ಆಡುವ ಕನಸಿನೊಂದಿಗೆ ಘಾನಾದ ರಿಚರ್ಡ್ ತೆಯಿ ಅಕುಮಿಹಾ ಮತ್ತು ಟೆತಿ ಪಿಲಿಪ್ ಆಡ್ಜಾ ಕಳೆದ ನವೆಂಬರ್‌ನಲ್ಲಿ ನಗರಕ್ಕೆ ಬಂದಿಳಿದಿದ್ದರು.

ಸ್ಥಳೀಯ ಏಜೆಂಟ್ ಸುಬ್ರಟಾ 500 ಅಮೆರಿಕನ್ ಡಾಲರ್ (ಸರಿ ಸುಮಾರು 31855 ರೂ.) ಪಡೆದಿದ್ದರು. ಆದರೆ ಕೋಲ್ಕತ್ತಾಕ್ಕೆ ಬಂದಿಳಿದ ಬಳಿಕವಷ್ಟೇ ತಾವು ಮೋಸ ಹೋಗಿರುವ ವಿಚಾರ ಗಮನಕ್ಕೆ ಬಂದಿತ್ತು.

ಒಂದೇ ಒಂದು ಕ್ಲಬ್ ಪರ ಆಡುವ ಅವಕಾಶ ದೊರಕಿಲ್ಲ. ಅಷ್ಟೇ ಯಾಕೆ ಇನ್ನೊಂದು ವಾರದೊಳಗೆ ವೀಸಾ ಕಾಲಾವಧಿ ಮುಗಿಯಲಿದ್ದು, ಇದರಿಂದ ಪೊಲೀಸರಿಂದ ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ.

ಒಟ್ಟಿನಲ್ಲಿ ಕಳೆದೆರಡು ತಿಂಗಳಿಂದ ಕೈಯಲ್ಲಿ ದುಡ್ಡಿಲ್ಲದೆ ಕೋಲ್ಕತ್ತಾ ಬೀದಿಗಳಲ್ಲಿ ಅಲೆದಾಡುವಂತಾಗಿದೆ. ಈ ಪೈಕಿ ಆಡ್ಜಾ ಘಾನಾ ಅಂಡರ್-20 ಪರ ಆಡಿದ ಆಟಗಾರನಾಗಿದ್ದು, ಕೇವಲ ಒಂದೇ ಒಂದು ಅವಕಾಶ ನೀಡುವಂತೆ ಸ್ಥಳೀಯ ಕ್ಲಬ್‌ಗಳಲ್ಲಿ ಹಾತೊರೆಯುತ್ತಿದ್ದಾರೆ. ನಾನು ನಿಮ್ಮನ್ನು ನಿರಾಸೆಗೊಳಿಸಲಾರೆ ಎಂದು ನುಡಿಯುತ್ತಿದ್ದಾರೆ.

Comments are closed.