ರಾಷ್ಟ್ರೀಯ

ಚಪ್ಪಲಿ ಹಾರ ಹಾಕಿ ಬಿಜೆಪಿ ನಾಯಕನಿಗೆ ಸ್ವಾಗತ

Pinterest LinkedIn Tumblr


ಭೋಪಾಲ್: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಸಂದರ್ಭದಲ್ಲಿ ಮನೆ ಬಾಗಿಲಿಗೆ ಬಂದ ಬಿಜೆಪಿ ಅಭ್ಯರ್ಥಿಗೆ ವಯೋವೃದ್ಧರೊಬ್ಬರು ಚಪ್ಪಲಿ ಹಾರಹಾಕಿ ಬರಮಾಡಿಕೊಂಡ ಘಟನೆ ನಡೆದಿದೆ.

ಭೋಪಾಲ್‍ನ ಧಾಮನೋದ್ ನಗರದಲ್ಲಿ ಸ್ಥಳೀಯ ಚುನಾವಣೆಗೆ ಪ್ರಚಾರ ನಡೆಯುತ್ತಿತ್ತು. ಈ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ದಿನೇಶ್ ಶರ್ಮಾ ಪ್ರಚಾರ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮನೆ ಮನೆಗೂ ಹೋಗಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಕೇಳುತ್ತಿದ್ದರು.
ಈ ವೇಳೆ ವೃದ್ಧರೊಬ್ಬರು ಕೈಗೆ ಚಪ್ಪಲಿ ಹಾರ ಎತ್ತಿಕೊಂಡು ಶರ್ಮಾಗೆ ಹಾಕಲು ಮುಂದಾಗಿದ್ದಾರೆ. ಮೊದಲು ಹಿಂಜರಿದ ಶರ್ಮಾ ಬಳಿಕ ತಾವಾಗಿಯೇ ಹಾರ ಹಾಕಿಸಿಕೊಂಡಿದ್ದಾರೆ. ಅವರಿಗೆ ಯಾವುದೋ ವಿಷಯದಲ್ಲಿ ಅಸಮಾಧಾನವಾಗಿದೆ, ಎಲ್ಲರಂತೆ ಅವರೂ ನಮ್ಮವರೇ, ಹೀಗಾಗಿ ನಾವಿಬ್ಬರೂ ಒಟ್ಟಿಗೆ ಕುಳಿತು ಮಾತನಾಡುತ್ತೇವೆ. ನಾನು ಅವರ ಮಗನಿದ್ದಂತೆ ಎಂದು ಶರ್ಮಾ ಹೇಳಿದ್ದಾರೆ.

ಇದೇ ವೇಳೆ ಎಎನ್‌ಐ ಶರ್ಮಾಗೆ ಹಾರಹಾಕಿದ ವೃದ್ದರನ್ನು ಸಂಪರ್ಕಿಸಿದ್ದು, ‘ನಮಗೆ ನೀರಿನ ಅಭಾವವಿದೆ, ಈ ಕುರಿತು ಮಹಿಳೆಯರು ಹಲವಾರು ಬಾರಿ ದೂರು ನೀಡಿದ್ದರು. ಮಹಿಳಾ ಸಂಘದ ಅಧ್ಯಕ್ಷೆ ಇತ್ತೀಚೆಗೆ ದೂರು ನೀಡಿದ ಸಂದರ್ಭದಲ್ಲಿ ಇವರ ವಿರುದ್ಧವೇ ದೂರು ದಾಖಲಾಗಿತ್ತು. ಅವರನ್ನು ರಾತ್ರಿ ಸೇರಿದಂತೆ ಹಲವಾರು ಸಂದರ್ಭದಲ್ಲಿ ಪೊಲೀಸ್‌ ಠಾಣೆಗೆ ಕರೆಯಲಾಗಿತ್ತು. ಹೀಗಾಗಿ ನಾನು ಈ ರೀತಿ ಮಾಡಿದೆ ಎಂದು ವೃದ್ಧ ಹೇಳಿದ್ದಾರೆ.

Comments are closed.