ರಾಷ್ಟ್ರೀಯ

ಬ್ಯಾಂಕ್‌ ಸಂಪಾದನೆ ಹರಾಮ್‌, ಮದುವೆ ಪ್ರಸ್ತಾವ ಬೇಡ: ದಾರುಲ್‌

Pinterest LinkedIn Tumblr


ಲಕ್ನೋ: ”ಮುಸ್ಲಿಮರು ಬ್ಯಾಂಕ್‌ ಉದ್ಯೋಗಿಗಳನ್ನು ಮದುವೆಯಾಗಬಾರದು; ಏಕೆಂದರೆ ಬ್ಯಾಂಕ್‌ ಉದ್ಯೋಗದಿಂದ ಸಂಪಾದಿಸುವ ಹಣ ಹರಾಮ್‌ ಆಗಿದೆ; ಆದುದರಿಂದ ಹರಾಮ್‌ ಹಣ ಸಂಪಾದಿಸುವವರ ಮದುವೆ ಪ್ರಸ್ತಾವವನ್ನು ಬಿಟ್ಟು ಉತ್ತಮ ಮಾರ್ಗದಲ್ಲಿ ಹಣ ಸಂಪಾದಿಸುವವರ ಮದುವೆ ಪ್ರಸ್ತಾವವನ್ನು ಪರಿಗಣಿಸಬೇಕು” ಎಂದು ಇಸ್ಲಾಮಿಕ್‌ ಧಾರ್ಮಿಕ ಸಂಸ್ಥೆ ದಾರುಲ್‌ ಉಲೂಮ್‌ ದೇವಬಂದ್‌ ಫ‌ತ್ವಾ ಹೊರಡಿಸಿದೆ.

‘ಭಾರತದಲ್ಲಿ ಬ್ಯಾಂಕಿಂಗ್‌ ಉದ್ಯೋಗದಲ್ಲಿದ್ದುಕೊಂಡು ಹಣ ಸಂಪಾದಿಸುವ ಕುಟುಂಬದ ಕೆಲವರಿಂದ ಬಂದಿರುವ ಮದುವೆ ಪ್ರಸ್ತಾವಗಳನ್ನು ತಾನು ಪರಿಗಣಿಸಬೇಕೋ ಬೇಡವೋ’ ಎಂದು ವ್ಯಕ್ತಿಯೊಬ್ಬ ಕೇಳಿದ ಪ್ರಶ್ನೆಗೆ ಉತ್ತರವಾಗಿ ದಾರುಲ್‌ ಉಲೂಮ್‌ ಸಂಸ್ಥೆ, ‘ಬ್ಯಾಂಕಿಂಗ್‌ ಉದ್ಯೋಗದಲ್ಲಿದ್ದುಕೊಂಡು ಹರಾಮ್‌ ಹಣ ಸಂಪಾದಿಸುವವರ ಮದುವೆ ಪ್ರಸ್ತಾವ ಪರಿಗಣಿಸದಿರುವುದು ಉತ್ತಮ’ ಎಂದು ಹೇಳಿದೆ.

‘ಹರಾಮ್‌ ಸಂಪತ್ತನ್ನು ಗಳಿಸುವವರ ವ್ಯಕ್ತಿತ್ವ ಒಳ್ಳೆಯದಾಗಿರುವುದಿಲ್ಲ ಮತ್ತು ಉನ್ನತ ನೈತಿಕತೆಯ ಮೌಲ್ಯಗಳನ್ನು ಒಳಗೊಂಡಿರುವುದಿಲ್ಲ; ಅಂತೆಯೇ ಬ್ಯಾಂಕಿಂಗ್‌ ಉದ್ಯೋಗದಿಂದ ಸಂಪಾದಿಸುವ ಹಣ ಹರಾಮ್‌ ಆಗಿರುವುದರಿಂದ ಅಂತಹವರ ಮದುವೆ ಪ್ರಸ್ತಾವಗಳನ್ನು ಪರಿಗಣಿಸದಿರುವುದೇ ಲೇಸು’ ಎಂದು ದಾರುಲ್‌ ಉಲೂಮ್‌ ಹೇಳಿದೆ.

ಇಸ್ಲಾಮಿಕ್‌ ಕಾನೂನು ಅಥವಾ ಶರೀಯತ್‌ ಬಡ್ಡಿಗೆ ಹಣವನ್ನು ನಿರ್ದಿಷ್ಟ ಅವಧಿಗೆ ಸಾಲವಾಗಿ ನೀಡುವ ಧಂದೆಯನ್ನು ಹರಾಮ್‌ ಎಂದು ಸಾರುತ್ತದೆ. ಹಾಗೆಯೇ ಇಸ್ಲಾಮಿಕ್‌ ತತ್ವಗಳಿಗೆ ವಿರುದ್ಧವಾದ ಕೆಲವೊಂದು ಉದ್ಯಮಗಳಲ್ಲಿ ಹಣ ಹೂಡುವುದನ್ನು ಕೂಡ ಅದು ಹರಾಮ್‌ ಎಂದು ನಿಷೇಧಿಸುತ್ತದೆ ಎಂದು ದಾರುಲ್‌ ಉಲೂಮ್‌ ಸ್ಪಷ್ಟಪಡಿಸಿದೆ.

-ಉದಯವಾಣಿ

Comments are closed.