ರಾಷ್ಟ್ರೀಯ

ಉಗ್ರ ಸಯೀದ್‌ ಜತೆ ವೇದಿಕೆ ಹಂಚಿಕೊಂಡ ರಾಯಭಾರಿ: ಪ್ಯಾಲೆಸ್ತೀನ್‌ ‘ತೀವ್ರ ವಿಷಾದ’, ಶಿಸ್ತುಕ್ರಮ

Pinterest LinkedIn Tumblr


ಹೊಸದಿಲ್ಲಿ: 26/11ರ ಮುಂಬಯಿ ದಾಳಿ ಸಂಚುಕೋರ, ಭಯೋತ್ಪಾದಕ ಹಫೀಜ್‌ ಸಯೀದ್‌ ಜತೆ ವೇದಿಕೆ ಹಂಚಿಕೊಂಡಿದ್ದಕ್ಕಾಗಿ ಪಾಕಿಸ್ತಾನದಲ್ಲಿರುವ ತನ್ನ ರಾಯಭಾರಿ ವಾಲಿದ್‌ ಅಬು ಆಲಿಯನ್ನು ಪ್ಯಾಲೆಸ್ತೀನ್‌ ವಾಪಸ್‌ ಕರೆಸಿಕೊಂಡಿದೆ.

ಭಾರತದಲ್ಲಿರುವ ಪ್ಯಾಲೆಸ್ತೀನ್ ರಾಯಭಾರಿ ಅದ್ನಾನ್‌ ಅಬು ಅಲ್‌ ಹಜ್ಜಾ ಈ ವಿಷಯ ತಿಳಿಸಿದ್ದಾರೆ.

‘ತಕ್ಷಣದಿಂದಲೇ ಆಲಿ ಪಾಕಿಸ್ತಾನದಲ್ಲಿ ತನ್ನ ರಾಯಭಾರಿಯಾಗಿರುವುದಿಲ್ಲ ಎಂದು ಪ್ಯಾಲೆಸ್ತೀನ್‌ ಸರಕಾರ ಘೋಷಿಸಿದೆ’ ಎಂದು ಹಜ್ಜಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.

‘ನಾವು ಭಾರತವನ್ನು ಬೆಂಬಲಿಸುತ್ತೇವೆ. ಭಯೋತ್ಪಾದನೆ ವಿರುದ್ಧದ ಭಾರತದ ಸಮರಕ್ಕೆ ನಮ್ಮ ಬೆಂಬಲವಿದೆ. ಹೀಗಾಗಿ ಪಾಕಿಸ್ತಾನದಲ್ಲಿರುವ ನಮ್ಮ ರಾಯಭಾರಿಯನ್ನು ತಕ್ಷಣವೇ ನೇರವಾಗಿ ಮನೆಗೆ ಕಳುಹಿಸಲು ನಮ್ಮ ಸರಕಾರ ನಿರ್ಧರಿಸಿದೆ. ಪಾಕಿಸ್ತಾನದಲ್ಲಿ ಇನ್ನು ಮುಂದೆ ನಮ್ಮ ರಾಯಭಾರಿಯಾಗಿ ಯಾರೂ ಇರುವುದಿಲ್ಲ’ ಎಂದು ಹಜ್ಜಾ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದರು.

ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಶುಕ್ರವಾರ ಜೆಯುಡಿ ಉಗ್ರ ಹಫೀಜ್‌ ಸಯೀದ್‌ ಆಯೋಜಿಸಿದ್ದ ರ‍್ಯಾಲಿಯಲ್ಲಿ ಪ್ಯಾಲೆಸ್ತೀನ್‌ ರಾಯಭಾರಿ ಕೂಡ ಭಾಗವಹಿಸಿದ್ದರು. ಇದನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಬಳಿಕ ಈ ಘಟನೆಗೆ ಪ್ಯಾಲೆಸ್ತೀನ್‌ ವಿಷಾದ ವ್ಯಕ್ತಪಡಿಸಿ, ಶಿಸ್ತುಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು.

‘ಪ್ಯಾಲೆಸ್ತೀನ್‌ ಸರಕಾರ ಈ ಘಟನೆ ಕುರಿತ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ. ಭಯೋತ್ಪಾದಕನ ಜತೆ ವೇದಿಕೆ ಹಂಚಿಕೊಂಡ ರಾಯಭಾರಿ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವುದಾಗಿ ಭಾರತ ಸರಕಾರಕ್ಕೆ ಭರವಸೆ ನೀಡಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

‘ಜಾಗತಿಕ ಭಯೋತ್ಪಾದಕನೆಂದು ವಿಶ್ವಸಂಸ್ಥೆ ಘೋಷಿಸಿದ್ದ ಸಯೀದ್‌ ಜತೆಗೆ ನಿಮ್ಮ ರಾಯಭಾರಿ ವೇದಿಕೆ ಹಂಚಿಕೊಂಡಿರುವುದು ಎಷ್ಟು ಮಾತ್ರಕ್ಕೂ ಸಹಿಸಲಾಗದು’ ಎಂದು ಭಾರತ ಕಟು ಶಬ್ದಗಳಲ್ಲಿ ಪ್ಯಾಲೆಸ್ತೀನ್‌ ಸರಕಾರಕ್ಕೆ ಪತ್ರ ಬರೆದಿತ್ತು.

ಭಾರತದ ಜತೆ ದ್ವಿಪಕ್ಷೀಯ ಬಾಂಧವ್ಯ ಹೊಂದಿರುವ ತಾನು, ಭಾರತವನ್ನು ಅಸ್ಥಿರಗೊಳಿಸಲು ಹವಣಿಸುವ ಉಗ್ರರ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ ಎಂದು ಪ್ಯಾಲೆಸ್ತೀನ್‌ ವಾಗ್ದಾನ ಮಾಡಿತ್ತು.

2008ರಲ್ಲಿ ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 166 ಮಂದಿ ಹತರಾಗಿದ್ದರು. ಈ ದಾಳಿಯ ಸಂಚುಕೋರನಾದ ಹಫೀಜ್‌ ಸಯೀದ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂತಾರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಿತ್ತು. ಅಮೆರಿಕ ಕೂಡ ಈತನ ತಲೆಗೆ 1 ಕೋಟಿ ಡಾಲರ್‌ ಬಹುಮಾನ ಘೋಷಿಸಿದೆ.

Comments are closed.