ರಾಷ್ಟ್ರೀಯ

ರೋಹಿಣಿ ಬಾಬಾ ಆಶ್ರಮದ ನೆಲಮಾಳಿಗೆಯಲ್ಲಿ 33 ಮಹಿಳೆಯರು, 12 ಪುರುಷರು ಪತ್ತೆ!

Pinterest LinkedIn Tumblr


ಆಗ್ರಾ: ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ವೀರೇಂದ್ರ ದೇವ್ ದೀಕ್ಷಿತ್ ಅವರ ಅಧ್ಯಾತ್ಮಿಕ ಈಶ್ವರಿಯಾ ವಿಶ್ವವಿದ್ಯಾನಿಲಯದ ಕಂಪಿಲ್ ಹಾಗೂ ಫಾರೂಕಾಬಾದ್ ಆಶ್ರಮದ ನೆಲಮಾಳಿಗೆಯಲ್ಲಿ 33 ಮಹಿಳೆಯರು ಮತ್ತು 12 ಪುರುಷರನ್ನು ಕೂಡಿಹಾಕಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಂಧನದಲ್ಲಿದ್ದ ಎಲ್ಲರೂ ವಯಸ್ಕರಾಗಿದ್ದು, ಈ ಎಲ್ಲರನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಇವರೆಲ್ಲರೂ ಮಾದಕದ್ರವ್ಯ ವ್ಯಸನಿಗಳೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್, ಮಧ್ಯಪ್ರದೇಶ ಮತ್ತು ನೇಪಾಳ ಮೂಲದ ಮಹಿಳೆಯರು ಆಶ್ರಮದ ನೆಲಮಹಡಿಯಲ್ಲಿ ಪತ್ತೆಯಾಗಿದ್ದಾರೆ.

ಫರೂಕಾಬಾದ್ ನಗರದ ಸಿಕಾತರ್‌ಭಾಗ್ ಮತ್ತು ಕಂಪಿಲ್‌ನ ಚೌಧರಿಯನ್ ಕಾಲೋನಿಯ ಆಶ್ರಮದ ಮೇಲೆ ದಾಳಿ ನಡೆಸಲಾಗಿದೆ. ಮುಂಜಾಗ್ರತೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಆರಂಭದಲ್ಲಿ ಆಶ್ರಮದ ಮಹಿಳೆಯರು ಆಶ್ರಮದ ಲೋಹದ ಬಾಗಿಲು ತೆರೆಯಲು ನಿರಾಕರಿಸಿದ್ದರು. ಆದರೆ, ಪೊಲೀಸರ ಒತ್ತಡದ ನಂತರ ಬಾಹಿಲು ತೆರೆದರು ಎಂದು ಅನಾಮಧೇಯ ಪೊಲೀಸರೊಬ್ಬರು ಮಾಹಿತಿ ನೀಡಿದ್ದಾರೆ.

ಮೂರು ಅಂತಸ್ತಿನ ಕಟ್ಟಡದಲ್ಲಿ 12ಕ್ಕೂ ಅಧಿಕ ಕತ್ತಲು ಕೋಣೆಗಳಿದ್ದು, ಕಬ್ಬಿಣದ ಬಾಗಿಲುಗಳ ನಡುವೆ ಯವಸ್ಕರನ್ನು ಬಂಧಿಸಿಡಲಾಗಿತ್ತು. ಬಾಗಿಕೊಂಡು ಹೋಗುವಷ್ಟೇ ಕಿರಿದಾದ ಕೋಣೆಗಳು ಇವಾಗಿವೆ ಎಂದು ಪೊಲೀಸರು ವಿವರಿಸಿದ್ದಾರೆ.

‘5 ವರ್ಷಗಳ ಹಿಂದೆ ನನ್ನ ಪೋಷಕರು ನನ್ನನ್ನು ಆಶ್ರಮದಲ್ಲಿ ಬಿಟ್ಟಿದ್ದಾರೆ. ನಾನು ಇಲ್ಲಿ ಆಧ್ಯಾತ್ಮಿಕ ಜ್ಞಾನ ಪಡೆಯುತ್ತಿದ್ದೇನೆ’ ಎಂದು ಬಂಧನದಲ್ಲಿದ್ದ ಕುಶಿನಗರ ಜಿಲ್ಲೆಯ ಸಂಗೀತಾ (25) ತಿಳಿಸಿದ್ದಾರೆ. ಅಶ್ರಮದಲ್ಲಿ ಕಿರುಕುಳ ನೀಡುತ್ತಿದ್ದಾರೆಯೇ ಎಂದು ಕೇಳಿದಾಗ ಆಕೆ ಯಾವುದೇ ರೀತಿಯ ಉತ್ತರ ನೀಡಿಲ್ಲ ಎಂದು ತಿಳಿದುಬಂದಿದೆ.

Comments are closed.