ರಾಷ್ಟ್ರೀಯ

ಇವಿಎಂ ಹ್ಯಾಕ್ ಮಾಡಲು ಎಂಜಿನಿಯರ್‌ಗಳ ನೇಮಕ: ಹಾರ್ದಿಕ್‌ ಆರೋಪ

Pinterest LinkedIn Tumblr

ಹೊಸದಿಲ್ಲಿ: ಗುಜರಾತ್‌ನಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ತಿದ್ದಲು ಬಿಜೆಪಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ತಂಡವನ್ನೇ ನೇಮಿಸಿಕೊಳ್ಳುತ್ತಿದೆ ಎಂದು ಸಾಧ್ಯತೆಯಿದೆ ಎಂದು ಪಾಟಿದಾರ್‌ ನಾಯಕ ಹಾರ್ದಿಕ್ ಪಟೇಲ್‌ ಆರೋಪಿಸಿದ್ದಾರೆ.

‘ಗುಜರಾತ್‌ನಲ್ಲಿ 4,000 ಇವಿಎಂಗಳನ್ನು ಹ್ಯಾಕ್‌ ಮಾಡಲು ಸಿದ್ಧತೆಗಳು ನಡೆದಿವೆ. ಇದಕ್ಕಾಗಿ ಅಹಮದಾಬಾದ್‌ ಮೂಲದ ಕಂಪನಿಯಿಂದ 140 ಎಂಜಿನಿಯರ್‌ಗಳ ನೆರವು ಪಡೆಯಲಾಗುತ್ತಿದೆ’ ಎಂದು ಹಾರ್ದಿಕ್ ಪಟೇಲ್ ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

ವಿಸ್‌ನಗರ್‌, ರಾಧಾಪುರ್‌ ಹಾಗೂ ಪಟೇಲ್‌ ಮತ್ತು ಬುಡಕಟ್ಟು ಪ್ರಾಬಲ್ಯದ ಇತರ ಹಲವು ಕ್ಷೇತ್ರಗಳ ಇವಿಎಂಗಳನ್ನು ಹ್ಯಾಕ್‌ ಮಾಡುವ ಪ್ರಯತ್ನ ಆರಂಭವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇವಿಎಂಗಳನ್ನು ತಿದ್ದಲು ಸಾಧ್ಯವಿದೆ ಎಂಬ ಆರೋಪವನ್ನು ಸಮರ್ಥಿಸಿಕೊಂಡ ಅವರು, ದೇವರು ಸೃಷ್ಟಿಸಿದ ಮನುಷ್ಯನ ದೇಹವನ್ನೇ ಬದಲಿಸಲು ಸಾಧ್ಯವಿರುವಾಗ ಇವಿಎಂಗಳನ್ನು ತಿದ್ದುವುದು ಕೂಡ ಸಾಧ್ಯ ಎಂದು ಪಟೇಲ್‌ ಹೇಳಿದರು.

ಎಟಿಎಂ ಹ್ಯಾಕಿಂಗ್‌ ಸಾಧ್ಯ ಎಂಬುದು ಸಾಬೀತಾಗಿದೆ. ಅದೇ ರೀತಿ ಇವಿಎಂ ಟ್ಯಾಂಪರಿಂಗ್‌ ಕೂಡ ಅಸಾಧ್ಯವೇನಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

‘ಗುಜರಾತ್‌ನಲ್ಲಿ ಬಿಜೆಪಿ ಸೋತರೆ ಅದು ಅದರ ಹಣೆಬರಹ. ಒಂದು ವೇಳೆ ಗೆದ್ದರೆ ಇವಿಎಂ ತಿದ್ದುವ ಮೂಲಕವೇ ಗೆಲ್ಲಬೇಕು. ಅದು ಗುಜರಾತ್‌ನಲ್ಲಿ ಗೆಲ್ಲಬಹುದು, ಆದರೆ ಹಿಮಾಚಲ ಪ್ರದೇಶದಲ್ಲಿ ಗೆಲ್ಲಲಾರದು’ ಎಂದು ಹಾರ್ದಿಕ್‌ ಬರೆದುಕೊಂಡಿದ್ದಾರೆ.

Comments are closed.