
ಪಟ್ನಾ: ರಾಜಧಾನಿಯಲ್ಲಿನ ತನ್ನ ಮನೆಗೆ ಮರಳುತ್ತಿದ್ದ ಬಿಹಾರ ನೀರಾವರಿ ಇಲಾಖೆಯ ಜೂನಿಯರ್ ಇಂಜಿನಿಯರ್ ವೀರಮಣಿ ಕುಮಾರ್ ಎಂಬವರನ್ನು ಅಪರಿಚಿತ ದುಷ್ಕರ್ಮಿಗಳು ಶರಣ್ ಜಿಲ್ಲೆಯಲ್ಲಿ ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀರಮಣಿ ಕುಮಾರ್ ಅವರನ್ನು ನೆರೆಯ ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅವರನ್ನು ನಿನ್ನೆ ಮಂಗಳವಾರ ತಡರಾತ್ರಿ ಸೋನೆಪುರ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಸಾಯಿಸಿದರು.
ಕುಮಾರ್ ಅವರು ಪಟ್ನಾದ ಕುರ್ಜಿ ಪ್ರದೇಶದಲ್ಲಿ ವಾಸವಾಗಿದ್ದರು. ಕಾರಿನಲ್ಲಿ ಬರುತ್ತಿದ್ದ ಅವರ ಮೇಲೆ ದುಷ್ಕರ್ಮಿಗಳು ಗುಂಡೆಸೆದು ಸಾಯಿಸಿದರು ಎಂದು ಶರಣ್ ಪೊಲೀಸ್ ಸುಪರಿಂಟೆಂಡೆಂಟ್ ಹರ್ಕಿಶೋರ್ ರಾಯ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕುಮಾರ್ ಅವರು ಆಸ್ತಿ ಸಂಬಂಧಿತ ವಿವಾದದಲ್ಲಿ ಸಿಲುಕಿದ್ದು ಪಟ್ನಾ ಪೊಲೀಸ್ ಠಾಣೆಯೊಂದರಲ್ಲಿ ಕೇಸ್ ದಾಖಲಾಗಿತ್ತು ಎಂದು ರಾಯ್ ತಿಳಿಸಿದರು.
-ಉದಯವಾಣಿ
Comments are closed.