ರಾಷ್ಟ್ರೀಯ

ಗುಜರಾತ್‌ನಲ್ಲೀಗ ‘Afzal ka yaar’ poster, ರಾಹುಲ್‌ ಗುರಿ

Pinterest LinkedIn Tumblr


ಹೊಸದಿಲ್ಲಿ : ರಾಹುಲ್‌ ಗಾಂಧಿ ಜತೆಗೆ ಸಲ್ಮಾನ್‌ ನಿಜಾಮಿ ಎಂಬ ಯುವಕ ನಿಂತುಕೊಂಡಿರುವ ಪೋಸ್ಟರ್‌ ಈಗ ಎರಡನೇ ಹಂತದ ಚುನಾವಣೆಗೆ ಸಜ್ಜುಗೊಳುತ್ತಿರುವ ಗುಜರಾತ್‌ನಲ್ಲಿ ವಿವಿಧೆಡೆ ಕಂಡು ಬರುತ್ತಿದೆ.

ಬಿಜೆಪಿ ಹೇಳುವ ಪ್ರಕಾರ ಈ ಸಲ್ಮಾನ್‌ ನಿಜಾಮಿ ಕಾಂಗ್ರೆಸ್‌ ಪಕ್ಷದ ಸದಸ್ಯ; ಕಾಶ್ಮೀರ ಪ್ರತ್ಯೇಕತಾವಾದಿ ಹೋರಾಟಗಾರ; ಪಾರ್ಲಿಮೆಂಟ್‌ ಮೇಲೆ ನಡೆದಿದ್ದ ಉಗ್ರ ದಾಳಿಯ ಮಾಸ್ಟರ್‌ ಮೈಂಡ್‌ ಅಫ್ಜಲ್‌ ಗುರುವನ್ನು ಬಹಿರಂಗವಾಗಿ ಬೆಂಬಲಿಸಿದಾತ; ನೇಣಿಗೆ ಹಾಕಲ್ಪಟ್ಟ ಅಫ್ಜಲ್‌ ಗುರು ಜಮ್ಮು ಕಾಶ್ಮೀರದ ಪ್ರತೀ ಮನೆಯಲ್ಲಿ ಮರು ಹುಟ್ಟು ಪಡೆಯುವ ಧೀಮಂತ ನಾಯಕ ಎಂದು ಹೇಳಿದ್ದಾತ; ಕಾಶ್ಮೀರದ ಸ್ವಾತಂತ್ರ್ಯದ ಹೋರಾಟಗಾರನಾಗಿ ತನ್ನನ್ನು ಗುರುತಿಸಿಕೊಂಡವ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಜತೆಗೆ ಸಲ್ಮಾನ್‌ ನಿಜಾಮಿ ನಿಂತುಕೊಂಡಿರುವ ಪೋಸ್ಟರ್‌ನಲ್ಲಿ ಈ ರೀತಿಯ ಬರಹ ಕಂಡು ಬಂದಿದೆ : ಜೋ ಅಫ್ಜಲ್‌ ಗುರು ಕಾ ಯಾರ್‌ ಹೈ, ವೋ ದೇಶ್‌ ಕಾ ಗದ್ದಾರ್‌ ಹೈ (ಯಾರು ಅಫ್ಜಲ್‌ ಗುರುವಿನ ಮಿತ್ರನೋ ಅವನು ದೇಶದ್ರೋಹಿ).

ರಾಹುಲ್‌ ಜತೆಗಿನ ನಿಜಾಮಿಯ ಈ ಫೋಟೋವನ್ನು ಆತ ಗುಜರಾತ್‌ನಲ್ಲಿ ಕಾಂಗ್ರೆಸ್‌ ಪರ ಪ್ರಚಾರ ನಡೆಸುತ್ತಿದ್ದಾಗ ತೆಗೆದದ್ದಾಗಿದೆ ಎಂದೂ ಪೋಸ್ಟರ್‌ ಹೇಳುತ್ತದೆ.

ಮೊನ್ನೆ ಶನಿವಾರವಷ್ಟೇ ನಿಜಾಮಿ ಮಾಡಿದ್ದ ಟ್ವೀಟ್‌ ಹೀಗಿದೆ : ರಾಹುಲ್‌ ಗಾಂಧಿ: ರಾಜೀವ್‌ ಗಾಂಧಿಯವರ ಮಗ – ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು; ರಾಹುಲ್‌ ಗಾಂಧಿ: ಇಂದಿರಾ ಗಾಂಧಿಯವರ ಮೊಮ್ಮಗ – ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು; ರಾಹುಲ್‌ ಗಾಂಧಿ: ಜವಾಹರ್‌ಲಾಲ್‌ ನೆಹರೂ ಅವರ ಮರಿಮಗ – ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು; ನರೇಂದ್ರ ಮೋದಿ: ಯಾರ ಮಗ ? ಯಾರ ಮೊಮ್ಮಗ….?

ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್‌ ಪಕ್ಷ ಇದೀಗ ನಿಜಾಮಿ ಎಂಬ ಹೆಸರಿನ ಯಾವುದೇ ನಾಯಕ ಅಥವಾ ಕಾರ್ಯಕರ್ತ ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದೆ.

ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಹುನ್ನಾರದೊಂದಿಗೆ ಪಾಕಿಸ್ಥಾನದ ಹಸ್ತ ಕ್ಷೇಪ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಬ್‌ ಸಿಡಿಸಿದ ತರುವಾಯ ಈ ಪೋಸ್ಟರ್‌ ಬೆಳವಣಿಗೆ ಬಹಿರಂಗವಾಗಿದೆ.

-ಉದಯವಾಣಿ

Comments are closed.