ರಾಷ್ಟ್ರೀಯ

ಹಿಂದೂ ಯುವ ವಾಹಿನಿ: 2,500 ಸದಸ್ಯರ ರಾಜೀನಾಮೆ

Pinterest LinkedIn Tumblr


ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಅವರಿಂದ ಸ್ಥಾಪಿತವಾದ ಹಿಂದೂ ಯುವವಾಹಿನಿಯ ಲಖನೌ ಘಟಕವನ್ನು ಬರ್ಖಾಸ್ತುಗೊಳಿಸಲಾಗಿದ್ದು, ಯುವವಾಹಿನಿಯ ರಾಜ್ಯ ಕಾರ್ಯದರ್ಶಿ ಪಂಕಜ್‌ ಸಿಂಗ್‌ ಅವರ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ಈ ಘಟಕದ 2,500ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡಿದ್ದಾರೆ. ಹಿರಿಯ ನಾಯಕರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರಿಂದ ತಾವು ಈ ಕ್ರಮ ಹಾದಿ ತುಳಿದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಘಟಕದ ಸದಸ್ಯರು ತಮ್ಮ ಪ್ರಭಾವ ಬಳಸಿ ಹಣ ಮಾಡುತ್ತಿದ್ದಾರೆಂಬ ಆಂತರಿಕ ವರದಿಯ ಹಿನ್ನೆಲೆಯಲ್ಲಿ ಲಖನೌ ಮಹಾನಗರ ಘಟಕವನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಪಿ.ಕೆ. ಪಾಟೀಲ್‌ ಶುಕ್ರವಾರ ಬರ್ಖಾಸ್ತು ಗೊಳಿಸಿದ್ದರು.

ಕೂಡಲೇ ಘಟಕದ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷ ರಾಮ್‌ ಕೃಷ್ಣ ದ್ವಿವೇದಿ ಮತ್ತಿತರ ಪದಾಧಿಕಾರಿಗಳು ತಮ್ಮ ರಾಜೀನಾಮೆ ಘೋಷಿಸಿದರಲ್ಲದೆ ಸರಕಾರಿ ಯೋಜನೆಗಳ ಗುತ್ತಿಗೆಯನ್ನು ಪಂಕಜ್‌ ಸಿಂಗ್‌ ಪಡೆದಿರುವ ಬಗ್ಗೆ ಮುಖ್ಯಮಂತ್ರಿ ತನಿಖೆಗೆ ಆದೇಶಿಸಬೇಕೆಂದೂ ಕೋರಿದರು.

ಸರಕಾರಿ ಗುತ್ತಿಗೆ ಪಡೆಯಲು ಸಿಂಗ್‌ ಅವರು ಯುವ ವಾಹಿನಿ ಹಾಗೂ ಆದಿತ್ಯನಾಥ್‌ ಅವರ ಹೆಸರು ದುರ್ಬಳಕೆ ಮಾಡುತ್ತಿದ್ದಾರೆ. ಮುಂದಿನ ವಾರ ಮತ್ತೆ 1,000 ಮಂದಿ ರಾಜೀನಾಮೆ ನೀಡಲಿದ್ದಾರೆ ಎಂದು ಹಿಂದೂ ಯುವ ವಾಹಿನಿಯ ಲಖನೌ ಮಹಾನಗರ ಘಟಕದ ಉಸ್ತುವಾರಿ ಅನುಭವ್‌ ಶುಕ್ಲಾ ಅವರು ಹೇಳಿದ್ದಾರೆ.

ಆದರೆ, ಪಂಕಜ್‌ ತಮ್ಮ ವಿರುದ್ಧದ ಆರೋಪ ನಿರಾಕರಿಸಿದ್ದಾರೆ. ಲಖನೌ ಘಟಕದ ಸದಸ್ಯರು ಅಧಿಕಾರಿಗಳ ವರ್ಗಾವಣೆ ಹಾಗೂ ನೇಮಕಾತಿ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದುದರಿಂದ ರಾಜ್ಯ ಘಟಕ ವರದಿ ಕೇಳಿತ್ತು ಹಾಗೂ ಅದರ ಆಧಾರದ ಮೇಲೆ ಘಟಕವನ್ನು ಬರ್ಖಾಸ್ತು ಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Comments are closed.