ರಾಷ್ಟ್ರೀಯ

ಶಬರಿಮಲೆಯಲ್ಲಿ ಕಾಣೆಯಾಗುವ ಮಕ್ಕಳ ಪತ್ತೆಗೆ ಆರ್‌ಎಫ್‌ಐಡಿ ಟ್ಯಾಗ್‌

Pinterest LinkedIn Tumblr


ಶಬರಿಮಲೆ: ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮಂಡಲಂ-ಮಕರವಿಳಕ್ಕು ಹಬ್ಬದ ಸಂದರ್ಭದಲ್ಲಿ ಕಾಣೆಯಾಗುವ 14 ವರ್ಷದೊಳಗಿನ ಮಕ್ಕಳ ಪತ್ತೆಗಾಗಿ ಶನಿವಾರ ಕೇರಳ ಪೊಲೀಸರು ಹಾಗೂ ವೊಡಾಫೋನ್‌ ಜಂಟಿ ಸಾರಥ್ಯದಲ್ಲಿ ‘ರೇಡಿಯೋ ತರಂಗಾಂತರ ಗುರುತಿನ ಟ್ಯಾಗ್‌’ ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಬರಿಮಲೆಗೆ ಬರುವ 14 ವರ್ಷದೊಳಗಿನ ಎಲ್ಲಾ ಮಕ್ಕಳ ಕೊರಳಿಗೆ ಪಂಬಾದಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ ಕಟ್ಟಲಾಗುವುದು. ಅದು ಅವರ ಕೊರಳಲ್ಲಿ ನೇತಾಡುತ್ತಿರುತ್ತದೆ. ಇದರಿಂದ ಸನ್ನಿಧಾನದಿಂದ ಪಂಬಾಕ್ಕೆ ಹಿಂದಿರುಗುವ ತನಕ ಅಂತಹ ಮಕ್ಕಳ ಚಲನವಲನ ಹಾಗೂ ಅವರು ಎಲ್ಲಿದ್ದಾರೆ ಎಂಬುದರ ಬಗ್ಗೆ ನಿಗಾ ಇಡಬಹುದಾಗಿದೆ.

ಈ ವ್ಯವಸ್ಥೆಯಿಂದಾಗಿ, ಶಬರಿಮಲೆ ವಾರ್ಷಿಕ ಯಾತ್ರೆಯ ಸಂದರ್ಭದಲ್ಲಿ ಮಕ್ಕಳು ಕಾಣೆಯಾಗುವುದನ್ನು ತಪ್ಪಿಸಬಹುದಾಗಿದೆ. ಮಕ್ಕಳು ಕಾಣೆಯಾದಾಗ ಅವರನ್ನು ಹುಡುಕುವ ಪೊಲೀಸರ ಶ್ರಮ ಇದರಿಂದ ಕಡಿಮೆಯಾಗಲಿದೆ. ಜತೆಗೆ ಅವರ ಸಮಯವೂ ಉಳಿತಾಯವಾಗಲಿದೆ. ಆ ಸಮಯವನ್ನು ಅವರು ಇತರ ಮಹತ್ವದ ಕೆಲಸಗಳಿಗೆ ಬಳಸಬಹುದಾಗಿದೆ.

14 ವರ್ಷದೊಳಗಿನ ಮಕ್ಕಳೊಂದಿಗೆ ಶಮರಿಮಲೆಗೆ ಯಾತ್ರೆ ಕೈಗೊಳ್ಳುವ ಕುಟುಂಬಗಳು ಇನ್ನು ಮುಂದೆ ಪಾಂಬಾದಲ್ಲಿರುವ ಕೇರಳ ರಾಜ್ಯ ಪೊಲೀಸ್‌ ಕಚೇರಿಗೆ ಭೇಟಿ ನೀಡಿ ‘ಟ್ಯಾಗ್‌’ ಸೇವೆಗೆ ಹೆಸರು ನೋಂದಾಯಿಸಿಕೊಳ್ಳಬಹುದು.

Comments are closed.