ಮುಜಾಫರ್‌ನಗರ: ಈ ದಂಪತಿಗೆ ಮಕ್ಕಳಿರಲಿಲ್ಲ. 1990ರಲ್ಲಿ ಅನಾಥ ಮಗುವೊಂದನ್ನು ದತ್ತು ಪಡೆದರು. ಇದೀಗ ಬರೋಬ್ಪರಿ 51 ಮಕ್ಕಳ ಹೆಮ್ಮೆಯ ಪೋಷಕರಾಗಿದ್ದಾರೆ ಈ ದಂಪತಿ.
ಹೌದು, ಒಂದು ಮಗುವನ್ನು ತೆಗೆದುಕೊಂಡ ದಂಪತಿ, ಮತ್ತೊಂದು, ಮಗದೊಂದನ್ನು ದತ್ತು ತೆಗೆದುಕೊಂಡು ಇದೀಗ 51 ಮಕ್ಕಳಿರುವ ಅನಾಥಾಲಯವನ್ನೇ ನಡೆಸುತ್ತಿದ್ದಾರೆ. ಶುಕ್ರತಾಲ್ ಎಂಬ ಪ್ರದೇಶದಲ್ಲಿರುವ ಈ ಅನಾಥಶ್ರಮದ ಪಕ್ಕದಲ್ಲಿಯೇ ಶಾಲೆಯೂ ಇದೆ. ಇದೀಗ ಇಲ್ಲಿ ಬೆಳೆದು ನಿಂತ 46 ಮಕ್ಕಳಿದ್ದು, ಅನೇಕರಿಗೆ ಕೆಲಸ ಸಿಕ್ಕಿದೆ, ಮದುವೆಯಾಗಿ, ಬೇರೆ ಹೋಗಿದ್ದಾರೆ.
1981ರಲ್ಲಿ ವೀರೆಂದರ್ ರಾಣಾ ಹಾಗೂ ಶಾಮ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆದರೆ, ಮೀನಾ ಗರ್ಭಕೋಶದಲ್ಲಿ ಗೆಡ್ಡೆಯಿದ್ದ ಕಾರಣ ಮದುವೆಯಾಗಿ ದಶಕ ಕಳೆದರೂ ಮಕ್ಕಳಾಗುವ ಲಕ್ಷಣಗಳು ಕಾಣಿಸಲಿಲ್ಲ. 1990ರಲ್ಲಿ ಶುಕ್ರತಾಲ್‌ನಲ್ಲಿ ಜಾಗವೊಂದನ್ನು ಕೊಂಡು, ಅಲ್ಲಿಗೆ ಸ್ಥಳಾಂತರಗೊಂಡರು. ಅಲ್ಲಿಯೇ ವರ್ಷದ ಅನಾಥ ಗಂಡು ಮಗುವೊಂದನ್ನು ಪಡೆದು, ಮಂಗೇರಾಮ್ ಎಂದು ಹೆಸರಿಸಿದರು. ದುರಾದೃಷ್ಟವಶಾತ್ ಆ ಮಗುವಿಗೆ ಐದು ವರ್ಷ ಕಳೆಯುವಷ್ಟರಲ್ಲಿ ಅಸುನೀಗಿತು. ಮತ್ತೊಂದು ಅನಾಥ ಮಗುವನ್ನು ಮನೆಗೆ ತಂದರು ಈ ದಂಪತಿ. ಒಂದಾದ ಮೇಲೆ ಮತ್ತೊಂದು ಮಗುವನ್ನು ತಂದು 51 ಮಕ್ಕಳು ಪೋಷಕರಾದರು.
‘ಯಾವ ಧರ್ಮಕ್ಕೆ ಸೇರಿರುವ ಮಗುವೆನ್ನುವುದು ನೋಡುವುದಿಲ್ಲ. ಪ್ರೀತಿ, ಮಮತೆ ಬಯಸೋ ಮಕ್ಕಳನ್ನು ಕರೆ ತರುತ್ತೇವೆ. ಅವರಿಗೆ ಅಗತ್ಯ ಶಿಕ್ಷಣ ನೀಡಿ, ಪೋಷಿಸುತ್ತೇವೆ,’ ಎನ್ನುತ್ತಾರೆ ಈ ವಿಶಾಲ ಹೃದಯಿ ದಂಪತಿ.
ಇದೀಗ ಈ ದಂಪತಿ ನಡೆಸುತ್ತಿರುವ ಅನಾಥಶ್ರಮದಲ್ಲಿ 19 ಹೆಣ್ಣು ಹಾಗೂ 27 ಗಂಡು ಮಕ್ಕಳಿದ್ದಾರೆ. ಅವರಲ್ಲಿ ಅನೇಕರ ದಿವ್ಯಾಂಗರು. ಅಡುಗೆ ಕೋಣೆ, ಅಗತ್ಯದಷ್ಟು ಕೊಠಡಿಗಳು ಹಾಗೂ ದೊಡ್ಡ ಆಟದ ಮೈದಾನವಿದೆ ಈ ಅನಾಥಶ್ರಮದಲ್ಲಿ. ಶುಕ್ರತಾಲ್ ಗ್ರಾಮ ಪಂಚಾಯತಿ ಈ ದಂಪತಿಗೆ ಭೂಮಿಯನ್ನು ನೀಡಿದೆ. ನೆರೆಹೊರೆಯವರು ಗೋಧಿ ಹಾಗೂ ಇತರೆ ದವಸ ಧಾನ್ಯಗಳನ್ನು ನೀಡಿದರೆ, ಖರ್ಚನ್ನು ದಾನಿಗಳು ನೀಡುವ ಹಣದಿಂದಲೇ ಸರಿದೂಗಿಸಲಾಗುತ್ತಿದೆ.
‘ಇವರು ನನ್ನನ್ನು ದತ್ತು ತೆಗೆದುಕೊಳ್ಳದೇ ಹೋಗಿದ್ದರೆ, ನನ್ನ ಭವಿಷ್ಯ ಹೇಗಿರುತ್ತಿತ್ತೋ ಗೊತ್ತಿಲ್ಲ. ಜೀವಮಾನ ಪೂರ್ತಿ ಇವರಿಗೆ ನಾನು ಋಣಿಯಾಗಿರುತ್ತೇನೆ,’ ಎನ್ನುತ್ತಾರೆ ಸ್ನಾತಕೋತ್ತರ ಪದವಿ ಪಡೆಯುತ್ತಿರುವ 22 ವರ್ಷದ ಮಮತಾ.