ರಾಷ್ಟ್ರೀಯ

ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾದವ್’ಗೆ ಪತ್ನಿಯನ್ನು ಭೇಟಿ ಮಾಡಲು ಅವಕಾಶ ನೀಡಿದ ಪಾಕಿಸ್ತಾನ

Pinterest LinkedIn Tumblr

ಇಸ್ಲಾಮಾಬಾದ್: ಭಾರತದ ಪರ ಬೇಹುಗಾರಿಕೆ ಮಾಡಿದ ಆರೋಪದ ಮೇರೆಗೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾದವ್ ತನ್ನ ಪತ್ನಿಯನ್ನು ಭೇಟಿ ಮಾಡಲು ಪಾಕಿಸ್ತಾನ ಸರ್ಕಾರ ಕೊನೆಗೂ ಅವಕಾಶ ಮಾಡಿಕೊಟ್ಟಿದೆ.

ಇದೇ ಡಿಸೆಂಬರ್ 25ರಂದು ಕುಲಭೂಷಣ್ ಜಾದವ್ ತನ್ನ ಪತ್ನಿ ಮತ್ತು ತಾಯಿಯನ್ನು ಭೇಟಿ ಮಾಡಬಹುದು ಎಂದು ಹೇಳಿದೆ. ಈ ಬಗ್ಗೆ ಹೇಳಿಕ ಪ್ರಕಟ ಮಾಡಿರುವ ಪಾಕಿಸ್ತಾನ ಸರ್ಕಾರದ ವಕ್ತಾರ ಮಹಮದ್ ಫೈಸಲ್ ಅವರು, ಇದೇ ಡಿಸೆಂಬರ್ 25ರಂದು ಕುಲ್ ಭೂಷಣ್ ಜಾಧವ್ ತನ್ನ ಪತ್ನಿ ಮತ್ತು ತಾಯಿಯನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತದೆ. ಈ ವೇಳೆ ಭಾರತದ ರಾಯಭಾರ ಕಚೇರಿಯ ಅಧಿಕಾರಿಗಳಿಗೂ ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಿದೆ.

ಇದಕ್ಕೂ ಮೊದಲು ಇದೇ ಪ್ರಸ್ತಾಪವನ್ನು ಭಾರತ ಪಾಕ್ ಸರ್ಕಾರದ ಮುಂದಿಟ್ಟಿತ್ತಾದರೂ, ಅದನ್ನು ಪಾಕಿಸ್ತಾನ ಸರ್ಕಾರ ಸತತವಾಗಿ ತಿರಸ್ಕರಿಸುತ್ತಾ ಬಂದಿತ್ತು. ಅಂತಿಮವಾಗಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋದ ಬಳಿಕ ಪಾಕಿಸ್ತಾನ ಸರ್ಕಾರ ಮೃದು ಧೋರಣೆ ತಳೆದಂತೆ ಕಾಣುತ್ತಿದೆ.

47 ವರ್ಷದ ಕುಲಭೂಷಣ್ ಜಾದವ್ ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದ್ದಾರೆ ಎಂಬ ಆರೋಪದ ಮೇರೆಗೆ ಕಳೆದ ಏಪ್ರಿಲ್ ನಲ್ಲಿ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ ಗಲ್ಲು ಶಿಕ್ಷೆ ಕಾಯಂಗೊಳಿಸಿತ್ತು. ಇದನ್ನು ವಿರೋಧಿಸಿ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು.

Comments are closed.