ರಾಷ್ಟ್ರೀಯ

ಪ್ರಧಾನಿ “ನೀಚ’ ಎಂದು ಕರೆದದ್ದಕ್ಕೆ ಕ್ಷಮೆಯಾಚಿಸಿದ ಮಣಿ ಶಂಕರ್‌

Pinterest LinkedIn Tumblr


ಹೊಸದಿಲ್ಲಿ: ಹಿರಿಯ ಕಾಂಗ್ರೆಸ್‌ ನಾಯಕ ಮಣಿ ಶಂಕರ್‌ ಅಯ್ಯರ್‌, ಪ್ರಧಾನಿ ನರೇಂದ್ರ ಮೋದಿ ಅವರನ್ನು “ನೀಚ” ಎಂದು ಕರೆದ ಬೆನ್ನಿಗೇ ಪಕ್ಷದ ಉಪಾಧ್ಯಕ್ಷ ರಾಹುಲ್‌ ಗಾಂಧಿ ತೀವ್ರ ಅಸಮಾಧಾನ, ಆಕ್ಷೇಪ ಮತ್ತು ಕೋಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಯ್ಯರ್‌ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

“ಕ್ಷಮಿಸಿ, ಹಿಂದಿ ನನ್ನ ಮಾತೃ ಭಾಷೆ ಅಲ್ಲ; ನೀಚ ಎಂಬ ಹಿಂದಿ ಪದಕ್ಕೆ ನನ್ನ ಗ್ರಹಿಕೆಯ ಅರ್ಥ ಕೆಳಮಟ್ಟದವ ಎಂದಾಗಿತ್ತು. ನಾನು ಯಾವತ್ತೂ ಹಿಂದಿಯಲ್ಲಿ ಮಾತನಾಡುವಾಗ ಮೊದಲು ಅದನ್ನು ಇಂಗ್ಲಿಷ್‌ನಲ್ಲಿ ಪರಿಭಾವಿಸುತ್ತೇನೆ; ಏಕೆಂದರೆ ಹಿಂದಿ ನನ್ನ ಮಾತೃ ಭಾಷೆ ಅಲ್ಲ. ನೀಚ ಎಂಬ ಪದಕ್ಕೆ ಬೇರೆಯೇ ಅರ್ಥ ಇದೆ ಎಂದಾದರೆ ನಾನು ಆ ಪದದ ತಪ್ಪು ಬಳಕೆಗಾಗಿ ಕ್ಷಮೆಯಾಚಿಸುತ್ತೇನೆ’ ಎಂದು ಮಣಿ ಶಂಕರ್‌ ಅಯ್ಯರ್‌ ಹೇಳಿದರು.

“2014ರ ಮಹಾ ಚುನಾವಣೆಯ ವೇಳೆ ನಾನೆಂದೂ ನರೇಂದ್ರ ಮೋದಿ ಅವರನ್ನು ಚಾಯ್‌ವಾಲಾ ಎಂದು ಕರೆದಿಲ್ಲ; ಬೇಕಿದ್ದರೆ ನೀವು ಇಂಟರ್‌ನೆಟ್‌ಗೆ ಹೋಗಿ ಅಲ್ಲಿರುವ ಎಲ್ಲ ವಿಡಿಯೋಗಳನ್ನು ಪರಿಶೀಲಿಸಿ’ ಎಂದು ಅಯ್ಯರ್‌ ಹೇಳಿದರು.

ಪ್ರಧಾನಿ ಮೋದಿಯನ್ನು “ನೀಚ’ನೆಂದು ಕರೆದುದಕ್ಕೆ ಕ್ಷಮೆಯಾಚಿಸುವಂತೆ ರಾಹುಲ್‌ ಗಾಂಧಿ ತಾಕೀತು ಮಾಡಿದ ಬಳಿಕವೇ ಅಯ್ಯರ್‌ ತಾವು ತಪ್ಪಾಗಿ ಆಡಿದ ಪದಕ್ಕೆ ಸ್ಪಷ್ಟೀಕರಣ ನೀಡಿ ಕ್ಷಮೆಯಾಚಿಸಿದ್ದರು.

“ಬಿಜೆಪಿ ಮತ್ತು ಪ್ರಧಾನಿ ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ಧಾಳಿ ನಡೆಸಲು ಯಾವತ್ತೂ ತೀರ ಕೊಳಕು ಭಾಷೆಯನ್ನು ಬಳಸುವುದುಂಟು. ಆದರೆ ಕಾಂಗ್ರೆಸ್‌ಗೆ ವಿಭಿನ್ನವಾದ ಸಂಸ್ಕೃತಿ ಮತ್ತು ಪರಂಪರೆ ಇದೆ. ಹಾಗಿದ್ದರೂ ಮಣಿ ಶಂಕರ್‌ ಅಯ್ಯರ್‌ ಅವರು ಪ್ರಧಾನಿ ವಿರುದ್ಧ ಬಳಸಿದ ಭಾಷೆ ಮತ್ತು ಅದರ ಧ್ವನಿಯನ್ನು ನಾನು ಮೆಚ್ಚುವುದಿಲ್ಲ. ಆದುದರಿಂದ ನಾನು ಮತ್ತು ಕಾಂಗ್ರೆಸ್‌ ಪಕ್ಷ, ಅಯ್ಯರ್‌ ತಮ್ಮ ಪ್ರಮಾದದ ಬಗ್ಗೆ ಕ್ಷಮೆಯಾಚಿಸಬೇಕೆಂದು ನಿರೀಕ್ಷಿಸುತ್ತೇವೆ’ ಎಂದು ರಾಹುಲ್‌ ಗಾಂಧಿ ಇಂದು ಗುರುವಾರ ಹೇಳಿದ್ದರು.

-ಉದಯವಾಣಿ

Comments are closed.