ಲಕ್ನೋ: ಚಿತ್ರಮಂದಿರದೊಳಗೆ ಸಿನಿಮಾ ಪ್ರದರ್ಶನವಾಗುತ್ತಿದ್ದ ವೇಳೆಯಲ್ಲಿಯೇ 16 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಮಿರತ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಹಿರಿಯ ಅಧಿಕಾರಿಯೊಬ್ಬರ ಹೇಳಿಕೆನ್ನಾಧಿರಿಸಿ ವರದಿ ಮಾಡಿರುವ ಮಾಧ್ಯಮವೊಂದು, ಕಳೆದ 2 ತಿಂಗಳ ಹಿಂದೆ ದೂರವಾಣಿಯಲ್ಲಿ ಮಾತನಾಡುತ್ತ ಪರಿಚಿತನಾಗಿದ್ದ ಯುವಕನೊಬ್ಬ ಆರೋಪಿಯಾಗಿದ್ದಾನೆ ಎಂದು ತಿಳಿಸಿದೆ.
ಮಂಗಳವಾರ ಪರಿಚಿತ ಆರೋಪಿ ಯುವತಿಯನ್ನು ಶಾಪಿಂಗ್ ಮಾಡುವ ಎಂದು ಹೇಳಿ ಮೌವಾನಾಕ್ಕೆ ಕರೆಯಿಸಿಕೊಂಡಿದ್ದ. ಶಾಪಿಂಗ್ ಬಳಿಕ ಸಿನಿಮಾ ನೋಡಲು ತೆರಳಿದ್ದರು. ಅಷ್ಟರಲ್ಲಿ 2ನೇ ಆರೋಪಿಯೂ ಚಿತ್ರಮಂದಿರದಲ್ಲಿ ಹಾಜರಾಗಿದ್ದ ಎಂದು ವರದಿ ವಿವರಿಸಿದೆ.
ಸಿನಿಮಾ ಪ್ರದರ್ಶನ ಆರಂಭವಾಗುತ್ತಿದ್ದಂತೆಯೇ ಯುವತಿಯನ್ನು ಬಾಲ್ಕನಿಗೆ ಕರೆದೊಯ್ದಿದ್ದರು, ಅಲ್ಲಿ ಇಬ್ಬರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು. ಬಳಿಕ ಯುವತಿಯನ್ನು ಬೈಕ್ ನಲ್ಲಿ ಮುಜಾಫರ್ ನಗರಕ್ಕೆ ಕರೆದೊಯ್ದಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಬೈಕ್ ಅನ್ನು ವಶಪಡಿಸಿಕೊಂಡಿದ್ದು, ಪ್ರಾಥಮಿಕ ತನಿಖೆಯನ್ನು ಆರಂಭಿಸಿರುವುದಾಗಿ ವರದಿ ತಿಳಿಸಿದೆ.