ರಾಷ್ಟ್ರೀಯ

ಉಚಿತ ಬಸ್‌ ಸೇವೆ: ಆಧಾರ್‌ ಕಡ್ಡಾಯ

Pinterest LinkedIn Tumblr


ಬರೇಲಿ: ಉತ್ತರ ಪ್ರದೇಶದಲ್ಲಿನ ಸರಕಾರಿ ಬಸ್‌ನಲ್ಲಿ ದಿವ್ಯಾಂಗರಿಗೆ ನೀಡುತ್ತಿದ್ದ ಉಚಿತ ಬಸ್‌ ಸೇವೆ ಪಡೆಯಲು ಇನ್ನು ಮುಂದೆ ಆಧಾರ್‌ ಕಡ್ಡಾಯ ಎಂದು ಸರಕಾರ ಆದೇಶ ಹೊರಡಿಸಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವಾರು ಮಂದಿ ಇಲ್ಲಿನ ಸರಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳನ್ನು ತಡೆಗಟ್ಟಲು ಮುಂದಾದ ಸರಕಾರ ಮುಂದಿನ ವರ್ಷದ ಆರಂಭದಿಂದಲೇ ದಿವ್ಯಾಂಗರು ತಮ್ಮ ಪ್ರಮಾಣ ಪತ್ರಕ್ಕೆ ಆಧಾರ್‌ ಲಿಂಕ್‌ ಮಾಡಬೇಕು ಎಂದು ಆದೇಶಿಸಿದೆ.

ಉಪಿಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಪಿ ಗುರುಪ್ರಸಾದ್‌ ಈ ನಿರ್ಧಾರವನ್ನು ಕೈಗೊಂಡಿದ್ದು, ದಿವ್ಯಾಂಗರು ಆಧಾರ್‌ ಕಾರ್ಡ್‌ನ ಪ್ರತಿಯನ್ನು ಹಿಡಿದು ಪ್ರಯಾಣ ಮಾಡಬೇಕು ಅಲ್ಲದೇ ನಿರ್ವಾಹಕ ಇದರ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ನಿರ್ದೇಶನ ಜಾರಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಉಪಿಎಸ್‌ಆರ್‌ಟಿಸಿ ಮುಖ್ಯ ಜನರಲ್ ಮ್ಯಾನೇಜರ್ ಎಚ್ಎಸ್ ಗಬಾ, ‘ ಉಚಿತ ಪ್ರಯಾಣದ ಸೌಲಭ್ಯ ಪಡೆಯಲು ಹೆಚ್ಚಿನ ಸಂದರ್ಭದಲ್ಲಿ ಜನರು ಒಂದೋ ನಕಲಿ ದಿವ್ಯಾಂಗ ಪ್ರಮಾಣ ಪತ್ರ ಸಿದ್ಧ ಪಡಿಸುತ್ತಾರೆ. ಇಲ್ಲವೇ ದಿವ್ಯಾಂಗರಿಂದ ಪತ್ರವನ್ನು ಪಡೆದು ಸೇವೆ ಪಡೆಯುತ್ತಾರೆ. ಕೆಲವು ವ್ಯಕ್ತಿಗಳು ಅಸಲಿ ಪತ್ರಕ್ಕೆ ತಮ್ಮ ಚಿತ್ರವನ್ನು ಅಂಟಿಸಿ ಅದರ ನಕಲು ಪತ್ರವನ್ನು ಸರಕಾರಕ್ಕೆ ಸಲ್ಲಿಸುತ್ತಾರೆ’.

ಹೀಗಾಗಿ ಇದನ್ನು ತಡೆಗಟ್ಟಲು ಸಿದ್ಧವಾಗಿರುವ ಸರಕಾರ ಆಧಾರ್‌ ಕಡ್ಡಾಯಗೊಳಿಸಿದೆ. ‘ ಆಧಾರ್‌ನಲ್ಲಿ ವ್ಯಕ್ತಿಯ ಸಂಪೂರ್ಣ ಮಾಹಿತಿ ದಾಖಲಾಗಿರುತ್ತದೆ. ಒಂದು ವೇಳೆ ಇದರಲ್ಲೂ ನಕಲು ಮಾಡಲು ಯತ್ನಿಸಿದರೂ ಆತ ಸಿಲುಕಿಕೊಳ್ಳುವುದು ಖಚಿತ’ ಎಂದು ಗಾಬಾ ಹೇಳಿದ್ದಾರೆ.

Comments are closed.