ರಾಷ್ಟ್ರೀಯ

ಧೈರ್ಯವಿದ್ದರೆ ಲಾಲ್‌ ಚೌಕ್‌ನಲ್ಲಿ ಧ್ವಜ ಹಾರಿಸಿ: ಫಾರೂಕ್‌ ಸವಾಲು

Pinterest LinkedIn Tumblr


ಹೊಸದಿಲ್ಲಿ: ‘ಪಾಕ್‌ ಆಕ್ರಮಿತ ಕಾಶ್ಮೀರ (ಪಿಓಕೆ) ಭಾರತದ್ದು ಎನ್ನುವ ಮಾತು ಹಾಗಿರಲಿ; ಧೈರ್ಯವಿದ್ದರೆ ಮೊದಲು ನೀವು ಶ್ರೀನಗರದ ಲಾಲ್‌ ಚೌಕ್‌ ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ನೋಡೋಣ’ ಎಂದು ಕೇಂದ್ರ ಸರಕಾರಕ್ಕೆ ಸವಾಲೊಡ್ಡುವ ಮೂಲಕ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲ ಅವರು ಇಂದು ಸೋಮವಾರ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಫಾರೂಕ್‌ ಅಬ್ದುಲ್ಲ ಈಚೆಗಷ್ಟೆ, “ಪಾಕ್‌ ಆಕ್ರಮಿತ ಕಾಶ್ಮೀರ ಪಾಕಿಸ್ಥಾನದ್ದು’ ಎಂದು ಹೇಳುವ ಮೂಲಕ ವಿವಾದಕ್ಕೆ ಕಿಡಿ ಹಚ್ಚಿದ್ದರು.

“ನರೇಂದ್ರ ಮೋದಿ ಸರಕಾರ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವೆವು ಎಂದು ಕೊಚ್ಚಿಕೊಳ್ಳುತ್ತದೆ. ಆದರೆ ಅದಕ್ಕೆ ಮೊದಲು ಶ್ರೀನಗರದ ಲಾಲ್‌ ಚೌಕ್‌ ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿ ತೋರಿಸಲಿ” ಎಂದು ಫಾರೂಕ್‌ ಸವಾಲೊಡ್ಡಿದರು.

“ಹೀಗೆ ಹೇಳುವ ಮೂಲಕ ನೀವು ಭಾರತೀಯರ ಭಾವನೆಗಳಿಗೆ ನೋವುಂಟು ಮಾಡುತ್ತಿರುವಿರಲ್ಲ?’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, “ಭಾರತೀಯ ಭಾವನೆ ಅಂದ್ರೆ ಏನು ? ನಾನು ಭಾರತೀಯನಲ್ಲ ಎಂಬುದು ನಿಮ್ಮ ಆಲೋಚನೆಯಾ ?’ ಎಂದು ಫಾರೂಕ್‌ ತಿರುಗೇಟು ನೀಡಿದರು.

ಕಾಂಗ್ರೆಸ್‌ ನಾಯಕ ಹಾಗೂ ಸಂಸದ ದಿವಂಗತ ಜಿ ಎಲ್‌ ಡೋಗ್ರಾ ಅವರ 30ನೇ ಪುಣ್ಯ ತಿಥಿಯ ಸಂದರ್ಭದಲ್ಲಿ ಅಬ್ದುಲ್ಲಾ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ರಜೆಯಲ್ಲಿ ತೆರಳಿದ ಸೇನಾ ಜವನಾನೋರ್ವನನ್ನು ಉಗ್ರರು ಈಚೆಗೆ ಕೊಂದ ಘಟನೆಯ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, “ಈ ಪ್ರಶ್ನೆಯನ್ನು ನೀವು ಕೇಂದ್ರ ಸರಕಾರಕ್ಕೆ ಕೇಳಬೇಕು; ಯಾಕೆಂದರೆ ನೋಟು ಅಪನಗದೀಕರಣದ ಬಳಿಕ ಕಾಶ್ಮೀರಕ್ಕೆ ಶಾಂತಿ ಮರಳಿದೆ ಎಂದವರು ಹೇಳಿಕೊಳ್ಳುತ್ತಾರೆ’ ಎಂದು ಅಬ್ದುಲ್ಲ ಕಟಕಿಯಾಡಿದರು.

-ಉದಯವಾಣಿ

Comments are closed.