
ಜೈಪುರ: ಖ್ಯಾತ ಬಾಲಿವುಡ್ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತಿ ಚಿತ್ರ ಕುರಿತಾದ ವಿವಾದ ಮುಂದುವರಿದಿರುವ ನಡುವೆಯೇ ಇಂದು ಶುಕ್ರವಾರ ರಾಜಸ್ಥಾನದ ನಹಾರ್‌ಗಢದ ಕೋಟೆಯ ಗೋಡೆಯಿಂದ ವ್ಯಕ್ತಿಯ ಶವ ನೇತಾಡುತ್ತಿರುವುದು ಕಂಡು ಬಂದಿದೆ.
ಈ ಶವ ಕಂಡು ಬಂದ ಪಕ್ಕದಲ್ಲೇ ಕಲ್ಲಿನ ಗೋಡೆಯ ಮೇಲೆ ಪದ್ಮಾವತಿ ಚಿತ್ರದ ವಿರುದ್ಧ ಎಚ್ಚರಿಕೆಯ ಘೋಷಣೆಯೊಂದು ಬರೆದಿರುವುದು ಕಂಡು ಬಂದಿದೆ.
“ಪದ್ಮಾವತಿ ಕಾ ವಿರೋಧ್; ಹಮ್ ಪುತ್ಲೆ ನಹೀಂ ಜಲಾತೇ; ಲಟ್‌ಕಾತೇ ಹೈಂ’ (ನಾವು ಪುತ್ಥಳಿಗಳನ್ನು ಸುಡುವುದಿಲ್ಲ; ನೇತಾಡಿಸುತ್ತೇವೆ) ಎಂಬ ಎಚ್ಚರಿಕೆಯ ಘೋಷಣೆಯನ್ನು ಕಲ್ಲಿನ ಗೋಡೆಯ ಮೇಲೆ ಬರೆಯಲಾಗಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಜೈಪುರದ ಡಿಸಿಪಿ ಸತ್ಯೇಂದ್ರ ಸಿಂಗ್ ಅವರು, “ವಿಷಯವೀಗ ತನಿಖೆಯಲ್ಲಿದೆ; ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ; ಕೋಟೆಯ ಮೇಲಿಂದ ನೇತಾಡುತ್ತಿರುವ 40ರ ಹರೆಯದ ವ್ಯಕ್ತಿಯ ಶವದ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ’ ಎಂದು ಹೇಳಿದ್ದಾರೆ.
ಪದ್ಮಾವತಿ ಚಿತ್ರವನ್ನು ಕಡುವಾಗಿ ವಿರೋದಿಸಿದ್ದ ಶ್ರೀ ರಾಜಪೂತ ಕರಣಿ ಸೇನಾ, “ನಾವು ಹಿಂಸೆಯನ್ನು ಖಂಡಿಸುತ್ತೇವೆ; ನಹಾರ್‌ಗಢ ಕೋಟೆಯಲ್ಲಿ ನೇತಾಡುವ ಶವ ಕಂಡು ಬಂದ ವಿದ್ಯಮಾನಕ್ಕೂ ನಮಗೂ ಯಾವುದೇ ನಂಟಿಲ್ಲ’ ಎಂದು ಹೇಳಿದೆ.
“ಪದ್ಮಾವತಿ ಚಿತ್ರಕ್ಕೆ ಯಾವುದೇ ರೀತಿಯ ಆವಶ್ಯಕ ಬದಲಾವಣೆಗಳನ್ನು ಮಾಡಿದ ಹೊರತಾಗಿಯೂ ಅದರ ಬಿಡಗಡೆಗೆ ನಾವು ಆಸ್ಪದ ನೀಡುವುದಿಲ್ಲ” ಎಂದು ಮೊನ್ನೆ ಬುಧವಾರ ಹೇಳಿದ್ದ ಕರಣಿ ಸೇನೆ ಅನಂತರ ತನ್ನ ಈ ಕಠಿನ ನಿಲುವನ್ನು ಕೊಂಚ ಬದಲಾಯಿಸಿ, “ಮೇವಾರ್ ರಾಜ ಕುಟುಂಬಕ್ಕೆ ಯಾವುದೇ ಆಕ್ಷೇಪ ಇಲ್ಲವೆಂದಾದರೆ ಪದ್ಮಾವತಿ ಚಿತ್ರದ ವಿರುದ್ಧದ ನಮ್ಮ ಪ್ರತಿಭಟನೆಯನ್ನು ನಾವು ಇಲ್ಲಿಗೇ ನಿಲ್ಲಿಸುತ್ತೇವೆ; ಪದ್ಮಾವತಿ ಕುರಿತಾದ ಯಾವುದೇ ನಿರ್ಧಾರವನ್ನು ನಾವು ಈಗಿನ್ನು ಮೇವಾರ್ ರಾಜ ಕುಟುಂಬಕ್ಕೆ ಬಿಡುತ್ತೇವೆ’ ಎಂದು ಹೇಳಿತು.
ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಮಧ್ಯ ಪ್ರದೇಶ, ಗುಜರಾತ್ (ಎಲ್ಲವೂ ಬಿಜೆಪಿ ಆಡಳಿತೆ ಇರುವ ರಾಜ್ಯಗಳು) ಹಾಗೂ ಪಂಜಾಬ್ (ಕಾಂಗ್ರೆಸ್ ಆಡಳಿತೆಯ ರಾಜ್ಯ) ಪದ್ಮಾವತಿ ಚಿತ್ರ ತಮ್ಮ ರಾಜ್ಯಗಳಲ್ಲಿ ಬಿಡುಗಡೆ ಮಾಡದಂತೆ ನಿಷೇಧ ಹೇರಿವೆ.
-ಉದಯವಾಣಿ
Comments are closed.