ರಾಷ್ಟ್ರೀಯ

ಆನೆ ಜತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೃತಪಟ್ಟ ವ್ಯಕ್ತಿ

Pinterest LinkedIn Tumblr


ಕೋಲ್ಕತಾ: ಆನೆ ಜತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಕೋಲ್ಕತ್ತಾದಲ್ಲಿನ ಜಲ್ಪೈಗುರಿ ಜಿಲ್ಲೆಯ ಸಾದಿಖ್ ರೆಹಮಾನ್ ಎಂಬ 40 ವರ್ಷದ ವ್ಯಕ್ತಿಯೇ ಮೃತಪಟ್ಟವರು.

ಸಾದಿಖ್ ಸ್ಥಳೀಯ ಬ್ಯಾಂಕ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಗುರುವಾರ ಸಂಜೆ 5 ಗಂಟೆಯಲ್ಲಿ ಲತಾಗುರಿ ಅರಣ್ಯ ಪ್ರದೇಶದಿಂದ ವಾಹನದಲ್ಲಿ ಸಂಚರಿಸುತ್ತಿರಬೇಕಾದರೆ ಅಲ್ಲಿ ಆನೆಯೊಂದು ಕಾಣಿಸಿಕೊಂಡಿದೆ. ಅದರ ಜತೆ ಸೆಲ್ಫಿ ತೆಗೆದುಕೊಳ್ಳುವ ಸಾಹಸಕ್ಕೆ ಕೈಹಾಕಿದ್ದಾನೆ ಸಾದಿಖ್.

ಹತ್ತಿರ ಹೋಗಿ ಆನೆ ಜತೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಅದು ಸೊಂಡಿಲಿನಿಂದ ಎತ್ತಿ ಎಸೆದಿದೆ. ಸಾಕಷ್ಟು ಜನ ರಸ್ತೆಯಲ್ಲಿ ನಿಂತು ಈ ದೃಶ್ಯ ನೋಡುತ್ತಿದ್ದರೂ ಸಾದಿಖ್‍ರನ್ನು ಪ್ರಾಣಾಪಾಯದಿಂದ ರಕ್ಷಿಸಲು ಸಾಧ್ಯವಾಗಿಲ್ಲ.

ಬಳಿಕ ಆನೆ ಕಾಡಿನೊಳಕ್ಕೆ ಹೋದ ಮೇಲೆ ಸಾದಿಖ್‌ರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ ಅದಾಗಲೆ ಅವರು ಮೃತಪಟ್ಟಿದ್ದರು. ಜಲ್ಪೈಗುರಿ ಪ್ರದೇಶದಲ್ಲಿ ಆನೆಗಳ ಸಂಚಾರ ಹೆಚ್ಚಾಗಿರುತ್ತದೆಂದು, ಸೆಲ್ಫಿಗಾಗಿ ಪ್ರಯತ್ನಿಸುವುದು, ಫೋಟೋ ತೆಗೆಯುವುದನ್ನು ಮಾಡಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸುತ್ತಿರುತ್ತಾರೆ. ಆದರೂ ಜನ ಇದನ್ನು ಗಂಭೀರವಾಗಿ ಪರಿಗಣಿಸದೆ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಕಳೆದ ವರ್ಷ ಇದೇ ಪ್ರದೇಶದಲ್ಲಿ ಆನೆ ದಾಳಿಯಿಂದ 84 ಮಂದಿ ಮೃತಪಟ್ಟಿದ್ದಾರೆ.

Comments are closed.