ರಾಷ್ಟ್ರೀಯ

ಆಧಾರ್‌ ಲಿಂಕ್‌ ಆಗದಿದ್ದಲ್ಲಿ ಖಾತೆ ಸಸ್ಪೆಂಡ್‌: ಎಸ್‌ಬಿಐ

Pinterest LinkedIn Tumblr


ಹೊಸದಿಲ್ಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ? ಹೌದಾದರೆ, ಆಧಾರ್‌ ಲಿಂಕ್‌ ಮಾಡಿಕೊಳ್ಳಲು ನಿರ್ಲಕ್ಷ್ಯ ಬೇಡ. ಡಿಸೆಂಬರ್‌ ಅಂತ್ಯದ ಒಳಗೆ ಖಾತೆಗೆ ಆಧಾರ್‌ ಲಿಂಕ್‌ ಆಗದೇ ಇದ್ದಲ್ಲಿ ಎಸ್‌ಬಿಐ ಕ್ರಮಕ್ಕೆ ಮುಂದಾಗಿದೆ.

ಒಂದೊಮ್ಮೆ ಆಧಾರ್‌ ಲಿಂಕ್‌ ಆಗದಿದ್ದರೆ ವಹಿವಾಟು ನಡೆಸಲು ಸಾಧ್ಯವಿಲ್ಲ. ಹೀಗೆಂದು “ಫೈನಾನ್ಶಿಯಲ್‌ ಎಕ್ಸ್‌ ಪ್ರಸ್‌’ ವರದಿ ಮಾಡಿದೆ. ಪರಿಷ್ಕೃತಗೊಂಡ ಅಕ್ರಮ ಹಣ ವರ್ಗಾವಣೆ ಕಾಯ್ದೆಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಬ್ಯಾಂಕ್‌ ಗ್ರಾಹಕರು ಡಿ.31ರ ಒಳಗಾಗಿ ಆಧಾರ್‌ ಲಿಂಕ್‌ ಮಾಡಬೇಕು. ಎಸ್‌ಬಿಐ ವೆಬ್‌ಸೈಟ್‌, ಎಸ್‌ಎಂಎಸ್‌, ಎಟಿಎಂ ಕೇಂದ್ರಗಳು ಮತ್ತು ಖುದ್ದಾಗಿ ಬ್ಯಾಂಕ್‌ ಶಾಖೆಗಳಿಗೆ ತೆರಳಿ ಆಧಾರ್‌ ನೀಡಲು ಅವಕಾಶ ಇದೆ ಎಂದು ಎಸ್‌ಬಿಐ ಟ್ವೀಟ್‌ ಮಾಡಿದ್ದಾಗಿ ವರದಿ ಮಾಡಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನಲ್ಲಿ ಆಧಾರ್‌ ಬಗ್ಗೆ ನಡೆದ ವಿಚಾರಣೆ ವೇಳೆ ಬ್ಯಾಂಕ್‌ಗಳು ಮತ್ತು ದೂರಸಂಪರ್ಕ ಕಂಪೆನಿಗಳು ಆಧಾರ್‌ ಲಿಂಕ್‌ ಮಾಡದೇ ಇದ್ದರೆ ಏನೋ ಆಗಿ ಹೋಗುತ್ತದೆ ಎಂಬಂತೆ ಹೆದರಿಕೆ ಹುಟ್ಟಿಸುವಂತೆ ಸೂಚನೆ ನೀಡುತ್ತಿವೆ ಎಂದು ಆರೋಪಿಸಲಾಗಿತ್ತು. ಅದಕ್ಕೆ ಸ್ಪಂದಿಸಿದ್ದ ಕೋರ್ಟ್‌, ಬ್ಯಾಂಕ್‌ಗಳು ಮತ್ತು ದೂರಸಂಪರ್ಕ ಕಂಪೆನಿಗಳಿಗೆ ಆ ರೀತಿ ನಡೆದುಕೊಳ್ಳದಂತೆ ಆದೇಶಿಸಿತ್ತು.

-ಉದಯವಾಣಿ

Comments are closed.