ರಾಷ್ಟ್ರೀಯ

ಭಾರತೀಯ ಯುವತಿ ಚಿತ್ರ ತಿರುಚಿ ಯಡವಟ್ಟು ಮಾಡಿಕೊಂಡ ಪಾಕ್ ರಕ್ಷಣಾ ಇಲಾಖೆಯ ಟ್ವಿಟರ್ ಖಾತೆ ಅಮಾನತು!

Pinterest LinkedIn Tumblr

ನವದೆಹಲಿ: ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಪಾಲೆಸ್ತೀನಿ ಮಹಿಳೆಯನ್ನು ಭಾರತದ ಕಾಶ್ಮೀರದ ಮಹಿಳೆ ಎಂದು ಬಿಂಬಿಸಿ ವಿಶ್ವ ಸಮುದಾಯದ ಎದುರು ಮುಜುಗರಕ್ಕೀಡಾಗಿದ್ದ ಪಾಕಿಸ್ತಾನ, ಇದೀಗ ಮತ್ತೆ ಅಂತಹುದೇ ಮತ್ತೊಂದು ಯಡವಟ್ಟು ಮಾಡಿಕೊಂಡು ತನ್ನ ಟ್ವಿಟರ್ ಖಾತೆಯನ್ನು ಅಮಾನತು ಮಾಡಿಕೊಂಡಿದೆ.

ಮೂಲಗಳ ಪ್ರಕಾರ ಡಿಫೆನ್ಸ್ ಪಾಕ್ (Defencepk) ಎಂಬ ಪಾಕಿಸ್ತಾನದ ರಕ್ಷಣಾ ಇಲಾಖೆಯ ಅಧಿಕೃತ ಟ್ವಿಟರ್ ಖಾತೆ ತಾನೇ ಮಾಡಿದ ಪ್ರಮಾದದಿಂದಾಗಿ ತನ್ನ ಖಾತೆಯನ್ನು ಅಮಾನತುಗೊಳಿಸಿಕೊಂಡಿದೆ. ಯುವತಿಯೊಬ್ಬಳು ಭಾರತ ವಿರೋಧಿ ಘೋಷಣೆಗಳಿರುವ ಭಿತ್ತಿ ಚಿತ್ರ ಹಿಡಿದು ನಿಂತಿರುವ ಚಿತ್ರವನ್ನು ಪಾಕ್ ಡಿಫೆನ್ಸ್ ಖಾತೆ ಟ್ವೀಟ್ ಮಾಡಿತ್ತು. ಆದರೆ ಈ ಟ್ವೀಟ್ ನಲ್ಲಿರುವ ಚಿತ್ರ ನಕಲಾಗಿದ್ದು, ಚಿತ್ರದಲ್ಲಿ ಕಾಣುವ ಯುವತಿಯೇ ಸ್ವತಃ ಈ ಬಗ್ಗೆ ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಖಾತೆಯ ವಿರುದ್ಧ ಕಿಡಿಕಾರಿದ್ದಾಳೆ.

ಬೇರೆ ಯಾವುದೇ ಚಿತ್ರಕ್ಕೆ ತನ್ನ ಮುಖವನ್ನು ಅಂಟಿಸಲಾಗಿದ್ದು, ಭಾರತದಲ್ಲಿ ಹಿಂಸೆ ಸೃಷ್ಟಿಸುವ ಉದ್ದೇಶದಿಂದ ತನ್ನ ಮುಖವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಭಾರತದಲ್ಲಿರುವ ಪ್ರತೀಯೊಬ್ಬ ಪ್ರಜೆಯೂ ಶಾಂತಿಯುತವಾಗಿ ಸೌಹಾರ್ಧಯುತವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ ಟ್ವಿಟರ್ ನಿಯಮಗಳನ್ನು ಮುರಿದ ಕಾರಣಕ್ಕೆ ಪಾಕ್ ಡಿಫೆನ್ಸ್ ಖಾತೆಯನ್ನು ಟ್ವಿಟರ್ ಸಂಸ್ಥೆ ಅಮಾನತು ಮಾಡಿದೆ. ಇದಕ್ಕೂ ಮೊದಲೇ ಪಾಕಿಸ್ತಾನ ಡಿಫೆನ್ಸ್ ಖಾತೆ ವಿವಾದಿತ ಚಿತ್ರವನ್ನು ಡಿಲೀಟ್ ಮಾಡಿತ್ತಾದರೂ, ಅಷ್ಟರಲ್ಲಾಗಲೇ ಟ್ವೀಟ್ ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು.

Comments are closed.