ರಾಷ್ಟ್ರೀಯ

ಅಯೋಧ್ಯೆ ರಾಮ ಮಂದಿರಕ್ಕೆ ಮುಸ್ಲಿಮರ ವಿರೋಧವಿಲ್ಲ: ಶ್ರೀ ಶ್ರೀ

Pinterest LinkedIn Tumblr


ಅಯೋಧ್ಯೆ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಹೆಚ್ಚಿನ ಸಂಖ್ಯೆಯ ಮುಸ್ಲಿಮರು ವಿರೋಧಿಸುತ್ತಿಲ್ಲ. ಕೆಲವರು ನನ್ನ ಈ ಮಾತನ್ನು ಒಪ್ಪುವುದಿಲ್ಲ ಎಂದು ನನಗೆ ಗೊತ್ತು; ಆದರೆ ಹೆಚ್ಚಿನ ಮುಸ್ಲಿಮರು ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಿಲ್ಲ ಎನ್ನುವುದು ಸತ್ಯ ಎಂದು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್‌ ಇಂದು ಗುರುವಾರ ಇಲ್ಲಿ ಹೇಳಿದರು.

‘ರಾಮ ಮಂದಿರ ನಿರ್ಮಾಣ ವಿವಾದ ಈಗಲ್ಲವಾದರೂ ಸದ್ಯೋಭವಿಷ್ಯದಲ್ಲಿ ನಮ್ಮ ಯುವ ಜನರು, ಮತ್ತು ಎರಡೂ ಸಮುದಾಯಗಳ ನಾಯಕರಿಂದ ಧನಾತ್ಮಕವಾಗಿ ಬಗೆಹರಿಯುವುದೆಂಬ ವಿಶ್ವಾಸ ನನಗಿದೆ’ ಎಂದು ಗುರು ಶ್ರೀ ಶ್ರೀ ರವಿಶಂಕರ್‌ ಹೇಳಿದರು.

ಶ್ರೀ ಶ್ರೀ ಅವರು ಇಂದು ಗುರುವಾರವೂ ರಾಮ ಮಂದಿರ – ಬಾಬರಿ ಮಸೀದಿ ವಿವಾದದಲ್ಲಿನ ಎಲ್ಲ ಹಿತಾಸಕ್ತಿದಾರರನ್ನು ಖುದ್ದು ಭೇಟಿಯಾಗಿ ಸಂಧಾನ ಯತ್ನ ನಡೆಸಿದ್ದರು. ಡಿ.5ರಂದು ಸುಪ್ರೀಂ ಕೋರ್ಟ್‌ ಈ ವಿವಾದದ ವಿಚಾರಣೆಯನ್ನು ಕೈಗತ್ತಿಕೊಳ್ಳುವುದಕ್ಕೆ ಮುಂಚೆಯೇ ಶ್ರೀ ಶ್ರೀ ನಡೆಸಿದ ಈ ಸಂಧಾನ ಯತ್ನ, ಸೌಹಾರ್ದ ಮಾತುಕತೆಯನ್ನು ಬಿಜೆಪಿ ಸ್ವಾಗತಿಸಿತ್ತು; ವಿರೋಧ ಪಕ್ಷೀಯರು ಆಕ್ಷೇಪಿಸಿದ್ದರು.

“ಈಗ ನಾವು ಸಂಧಾನ ಯತ್ನವನ್ನು ಆರಂಭಿಸಿದ್ದೇವೆ. ಈಗಲೂ ಅದರ ಫ‌ಲಶ್ರುತಿ ಕಾಣಲು ಸಾಧ್ಯವಾಗದು; ಹಾಗಿದ್ದರೂ ಅಯೋಧ್ಯೆಯಲ್ಲಿನ ಎಲ್ಲರ ಮನೋಭೂಮಿಕೆ ಧನಾತ್ಮಕವಾಗಿದೆ; ಮುಂದೊಂದು ದಿನ ಶೀಘ್ರವೇ ಈ ವಿವಾದ ಹೊಂದಾಣಿಕೆಯಿಂದ ಬಗೆಹರಿದೀತು ಎಂಬ ವಿಶ್ವಾಸವಿದೆ’ ಎಂದು ಶ್ರೀ ಶ್ರೀ ರವಿಶಂಕರ್‌ ಹೇಳಿದರು.

ಶ್ರೀ ಶ್ರೀ ಅವರು ಬುಧವಾರ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೊಂದಿಗೆ ಅವರ ನಿವಾಸದಲ್ಲಿ ಅಯೋಧ್ಯೆ ಕುರಿತಾಗಿ ಮಾತುಕತೆ ನಡೆಸಿದ್ದರು.

-ಉದಯವಾಣಿ

Comments are closed.