ರಾಷ್ಟ್ರೀಯ

ರಾಮ್‌ರಹೀಂ-ಹನಿಪ್ರೀತ್‌ ಜೋಡಿ ರೂ. 11,000ಕ್ಕೆ ಮಾರಾಟ!

Pinterest LinkedIn Tumblr


ಉಜ್ಜಯಿನಿ: ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ ಹಾಗೂ ಹನಿಪ್ರೀತ್‌ ಜೋಡಿಯು 11,000ಕ್ಕೆ ಹರಾಜಾಗಿದ್ದಾರೆ. ಕಂಬಿ ಎಣಿಸುತ್ತಿರುವವರಿಗೂ ಇಷ್ಟೊಂದು ಕಿಮ್ಮತ್ತೇ ಎಂದುಕೊಳ್ಳಬೇಡಿ. ಇವು ಕತ್ತೆಯ ಜೋಡಿಗಳು!

ಹೌದು, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ವಾರ್ಷಿಕ ಕತ್ತೆಗಳ ಮೇಳದಲ್ಲಿ ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣಗಳಲ್ಲಿ ಜೈಲು ಸೇರಿರುವ ದೇರಾ ಸಚ್ಚಾ ಸೌದ ಮುಖ್ಯಸ್ತ ರಾಮ್‌ರಹೀಂ ಹಾಗೂ ಹಿಂಸಾಚಾರಕ್ಕೆ ಪ್ರೇರೇಪಿಸಿದ ಆತನ ಪ್ರೇಯಸಿ ಹನಿಪ್ರೀತ್‌ ಹೆಸರನ್ನುಳ್ಳ ಕತ್ತೆಜೋಡಿಗಳನ್ನು ರಾಜಸ್ಥಾನದ ವ್ಯಕ್ತಿಯೊಬ್ಬರು 11,000ಕ್ಕೆ ಕೊಂಡುಕೊಂಡಿದ್ದಾರೆ.

ಕತ್ತೆಗಳ ಮೌಲ್ಯ ನಿರ್ಧರಿಸುವಲ್ಲಿ ಅವುಗಳ ದೈಹಿಕ ರೂಪ ಹಾಗೂ ತಳಿಗಳೇ ಮುಖ್ಯವಾದರೂ ಮಾರಾಟಗಾರರು ಜನರನ್ನು ಸೆಳೆಯಲು ತಮ್ಮ ಕತ್ತೆಗಳಿಗೆ ಫ್ಯಾನ್ಸಿ ಹೆಸರುಗಳನ್ನಿಡುತ್ತಾರೆ ಎನ್ನುತ್ತಾರೆ ಮೇಳದ ಸಂಯೋಜಕರು.

ಈ ಬಾರಿ ಜಿಎಸ್‌ಟಿ, ಜಿಯೋ, ಸುಲ್ತಾನ್‌, ಬಾಹುಬಲಿ ಹೆಸರಿನ ಕತ್ತೆಗಳೂ ಮೇಳದಲ್ಲಿ ಗಮನ ಸೆಳೆದಿವೆ.

ಗುಜರಾತ್‌ನಿಂದ ಈ ಸಿಂಗ್‌ ಜೋಡಿಯನ್ನು ಕರೆತಂದಿದ್ದ ವ್ಯಾಪಾರಿ ಹರಿಓಂ ಪ್ರಜಾಪತ್‌ ಅವರನ್ನು ಕತ್ತೆಗಳಿಗೆ ಈ ಹೆಸರುಗಳನ್ನಿಡಲು ಕಾರಣ ಕೇಳಿದರೆ, ”ಈ ಇಬ್ಬರು ತಮ್ಮ ದುಷ್ಕೃತ್ಯಕ್ಕೆ ಬೆಲೆ ತೆರಬೇಕಾಯಿತು ಎಂಬ ಸಂದೇಶ ನೀಡುವ ಉದ್ದೇಶ ನನ್ನದು,” ಎಂದಿದ್ದಾರೆ.

ಐದು ದಿನಗಳ ಕಾಲ ನಡೆದ ಕತ್ತೆಗಳ ಮೇಳ ಶನಿವಾರ ಮುಕ್ತಾಯಗೊಂಡಿದ್ದು, ಸುಮಾರು 2000 ಕತ್ತೆಗಳನ್ನು ಮಾರಾಟಕ್ಕೆ ಕರೆತರಲಾಗಿತ್ತು ಎಂದು ಆಯೋಜಕರು ತಿಳಿಸಿದ್ದಾರೆ.

Comments are closed.