ರಾಷ್ಟ್ರೀಯ

ಕಾಶ್ಮೀರ: 6 ತಿಂಗಳಲ್ಲಿ 80 ಉಗ್ರರ ಹತ್ಯೆ

Pinterest LinkedIn Tumblr


ಶ್ರೀನಗರ: ದಕ್ಷಿಣ ಕಾಶ್ಮೀರದಲ್ಲಿ ಕಳೆದ 6 ತಿಂಗಳಲ್ಲಿ ಸುಮಾರು 80 ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಣಿವೆಯಲ್ಲಿ ಇನ್ನೂ 115 ಉಗ್ರರು ಸಕ್ರಿಯವಾಗಿದ್ದು ಅವರಲ್ಲಿ 12ಕ್ಕೂ ಹೆಚ್ಚು ಮಂದಿ ವಿದೇಶೀಯರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿ ಈಗಲೂ 115 ಉಗ್ರರು ಸಕ್ರಿಯರಾಗಿದ್ದು 99 ಮಂದಿ ಸ್ಥಳೀಯರಾಗಿದ್ದರೆ, ಉಳಿದ 15-16 ಮಂದಿ ವಿದೇಶೀ ಭಯೋತ್ಪಾದಕರು. ಕಳೆದ ಆರೇಳು ತಿಂಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ 80 ಉಗ್ರರನ್ನು ಮುಗಿಸಲಾಗಿದೆ. ಹತರಾದರವಲ್ಲಿ ಉಗ್ರರ ವರಿಷ್ಠ ನಾಯಕನೂ ಸೇರಿದ್ದಾನೆ.

‘ಉಗ್ರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಪರಿಸ್ಥಿತಿ ಸುಧಾರಣೆಯಾಗುತ್ತಿದೆ’ ಎಂದು ಸೇನೆಯ ವಿಜಯ ದಳ (ವಿಕ್ಟರ್‌ ಫೋರ್ಸ್‌)ದ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಮೇಜರ್‌ ಜನರಲ್‌ ಬಿ.ಎಸ್‌ ರಾಜು ಸುದ್ದಿಗಾರರಿಗೆ ತಿಳಿಸಿದರು.

ಶೋಪಿಯಾನ್‌ನಲ್ಲಿ ಬಿಜೆಪಿಯ ಯುವ ನಾಯಕನೊಬ್ಬನ ಹತ್ಯೆ ಕುರಿತ ಪ್ರಶ್ನೆಗೆ, ‘ಇವೆಲ್ಲ ಅಳಿದುಳಿದ ಉಗ್ರರ ಹತಾಶ ಕೃತ್ಯಗಳು’ ಎಂದು ಮೇಜರ್ ಜನರಲ್‌ ರಾಜು ಉತ್ತರಿಸಿದರು.

‘ಭದ್ರತಾ ಪಡೆಗಳ ಮೇಲೆ ಯೋಜಿತ ದಾಳಿ ನಡೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ದುರ್ಬಲ ಗುರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಕೃತ್ಯಗಳ ಹಿಂದಿರುವ ದುಷ್ಟರನ್ನು ಪೊಲೀಸರು ಸದೆ ಬಡಿಯುತ್ತಾರೆ’ ಎಂದು ಅವರು ತಿಳಿಸಿದರು.

ದಕ್ಷಿಣ ಕಾಶ್ಮೀರದ ಜನತೆ ಇನ್ನು ಮುಂದೆ ಶಾಂತಿಯಿಂದ ಬದುಕುವಂತೆ ಭದ್ರತಾ ಪಡೆಗಳು ಖಾತ್ರಿಪಡಿಸುವ ದಿನ ಬಹಳ ದೂರವಿಲ್ಲ. ಎಲ್ಲ ಉಗ್ರರನ್ನು ಸದೆಬಡಿದು ಶಾಂತಿ ಸ್ಥಾಪಿಸಲಾಗುವುದು ಎಂದು ಅವರು ವಿವರಿಸಿದರು.

‘ದಕ್ಷಿಣ ಕಾಶ್ಮೀರದಲ್ಲಿ ಈಗ ಪರಿಸ್ಥಿತಿ ಬಹಳ ಸುಧಾರಿಸಿದೆ. ಕಲ್ಲು ತೂರಾಟ ಮತ್ತು ಉಗ್ರರು ಪ್ರಚೋದಿಸುವ ಸಂಘರ್ಷಗಳು ಗಣನೀಯವಾಗಿ ಕುಸಿದಿವೆ. ಚಳಿಗಾಲ ಆರಂಭವಾಗುತ್ತಿದ್ದು, ನಮ್ಮ ಕ್ರಮಗಳು ಮತ್ತಷ್ಟು ಪರಿಣಾಮಕಾರಿಯಾಗಲಿವೆ. ನಿರ್ದಿಷ್ಟವಾಗಿ ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆಯನ್ನು ಬೇರು ಸಹಿತ ಕಿತ್ತೊಗೆಯಲಾಗುವುದು’ ಎಂದು ಅವರು ನುಡಿದರು.

Comments are closed.