ರಾಷ್ಟ್ರೀಯ

ಆಧಾರ್‌ ಸಿಂಧುತ್ವ ಪ್ರಶ್ನಿಸಿದ ದೀದಿ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಚಾಟಿಯೇಟು

Pinterest LinkedIn Tumblr
Chief Minister Mamata Banerjee

ಹೊಸದಿಲ್ಲಿ: ಆಧಾರ್‌ನ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರವನ್ನು ಸುಪ್ರೀಂ ಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಕೇಂದ್ರ ಸರಕಾರ ಅಂಗೀಕರಿಸಿದ ಕಾಯ್ದೆಯನ್ನು ಪ್ರಶ್ನಿಸುವ ಅಧಿಕಾರ ರಾಜ್ಯ ಸರಕಾರಕ್ಕಿಲ್ಲ ಎಂದು ಚಾಟಿ ಬೀಸಿದೆ.

‘ಆಧಾರ್‌ ಕುರಿತ ವಿವಾದವನ್ನು ಪರಿಶೀಲಿಸುವ ಅಗತ್ಯವಿದೆ; ಆದರೆ ಸಂಸತ್ತು ಅನುಮೋದಿಸಿರುವ ಕಾಯ್ದೆಯೊಂದನ್ನು ರಾಜ್ಯ ಸರಕಾರ ಪ್ರಶ್ನಿಸುವಂತಿಲ್ಲ’ ಎಂದು ನ್ಯಾಯಮೂರ್ತಿ ಎ.ಕೆ ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರ ಪೀಠ ತಿಳಿಸಿದೆ.

ಆಧಾರ್‌ ಇಲ್ಲದೆ ಸಾಮಾಜಿಕ ಯೋಜನೆಗಳ ಲಾಭ ಪಡೆಯಲಾಗದು ಎಂಬ ಅಂಶವನ್ನು ಮಾತ್ರ ವೈಯಕ್ತಿಕ ನೆಲೆಯಲ್ಲಿ ಬೇಕಿದ್ದರೆ ಪ್ರಶ್ನಿಸಬಹುದು ಎಂದು ಕೋರ್ಟ್‌ ಸ್ಪಷ್ಟಪಡಿಸಿತು.

‘ವ್ಯಕ್ತಿಗಳು ಈ ಅಂಶವನ್ನು ಪ್ರಶ್ನಿಸಿ ಕೋರ್ಟ್‌ಗೆ ಬರಬಹುದು. ಆದರೆ ರಾಜ್ಯ ಸರಕಾರ ಪ್ರಶ್ನಿಸುವಂತಿಲ್ಲ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಬ್ಬ ಪ್ರಜೆಯಾಗಿ ನಮ್ಮ ಬಳಿ ಬರಬಹುದು. ಆಗ ವಿಚಾರಣೆ ನಡೆಸುತ್ತೇವೆ’ ಎಂದು ನ್ಯಾಯಪೀಠ ಘೋಷಿಸಿತು.

ಸುಪ್ರೀಂ ಕೋರ್ಟ್‌ ಇದೇ ವೇಳೆ, ಮೊಬೈಲ್‌ ಸಂಪರ್ಕಗಳಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿದ ಅರ್ಜಿಯೊಂದರ ಮೇರೆಗೆ ಕೇಂದ್ರ ಸರಕಾರಕ್ಕೆ ನೋಟೀಸ್‌ ಜಾರಿ ಮಾಡಿ ಉತ್ತರಿಸಲು ನಾಲ್ಕು ವಾರಗಳ ಗಡುವು ನೀಡಿತು.

ಸುಪ್ರೀಂ ಕೋರ್ಟಿನ ಚಾಟಿಯೇಟಿಗೆ ತತ್ತರಿಸಿದ ಪಶ್ಚಿಮ ಬಂಗಾಳ ಸರಕಾರ, ಆಧಾರ್‌ ಕಾಯ್ದೆಯನ್ನು ಪ್ರಶ್ನಿಸುವುದಿಲ್ಲ, ಕಾಯ್ದೆಗೆ ಬದ್ಧವಾಗಿರುವಂತೆ ಕಾರ್ಮಿಕ ಸಚಿವಾಲಯ ಅಧಿಸೂಚನೆ ಹೊರಡಿಸುತ್ತದೆ ಎಂದು ಕೋರ್ಟಿಗೆ ತಿಳಿಸಿತು.

Comments are closed.