ರಾಷ್ಟ್ರೀಯ

ಭಾರತೀಯ ಸೇನೆಗೆ ಹೊಸ ಶಸ್ತ್ರಬಲ; ಚೀನಾಗೆ ಶಾಕ್‌!

Pinterest LinkedIn Tumblr


ಹೊಸದಿಲ್ಲಿ: ಚೀನಾ ಮತ್ತು ಪಾಕಿಸ್ತಾನದ ಗಡಿಯಲ್ಲಿ ಇತ್ತೀಚೆಗೆ ಹೆಚ್ಚಿರುವ ಭದ್ರತೆ ಆತಂಕದ ಬೆನ್ನಲ್ಲೇ ಭಾರತೀಯ ಸೇನಾಪಡೆ ಯುದ್ಧ ಸನ್ನದ್ಧತೆ ತೀವ್ರಗೊಳಿಸಿದೆ.

ಬರೋಬ್ಬರಿ 40,000 ಕೋಟಿ ರೂ. ವೆಚ್ಚದಲ್ಲಿ ಸೇನೆಯ ಶಸ್ತ್ರಾಸ್ತ್ರಗಳ ಸಂಪೂರ್ಣ ಆಧುನೀಕರಣ ಯೋಜನೆಯನ್ನು ಸೇನೆ ಅಂತಿಮಗೊಳಿಸಿದೆ.

ಈಗಾಗಲೇ ಹಳತಾಗಿರುವ ಶಸ್ತ್ರಾಸ್ತ್ರಗಳನ್ನು ಮೂಲೆಗೆಸೆದು, ಭಾರಿ ಸಂಖ್ಯೆಯಲ್ಲಿ ಮೆಷಿನ್‌ಗನ್‌ಗಳು, ಅಸಾಲ್ಟ್‌ ರೈಫಲ್‌ಗಳು, ಕಾರ್ಬೈನ್‌ಗಳನ್ನು (ಸಣ್ಣ ಬಂದೂಕು) ಖರೀದಿಸಲು ಸೇನೆ ಮುಂದಾಗಿದೆ.

ಈ ಕುರಿತ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯದಿಂದಲೂ ಗ್ರೀನ್‌ ಸಿಗ್ನಲ್‌ ದೊರೆತಿದ್ದು, ಸದ್ಯದಲ್ಲೇ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವದಲ್ಲೇ ಎರಡನೇ ಅತಿದೊಡ್ಡ ಸೇನಾಪಡೆ ಎನಿಸಿರುವ ಭಾರತೀಯ ಸೇನೆಯ ಸಮರ ಸನ್ನದ್ಧತೆ ಹೆಚ್ಚಿಸಲು ಮತ್ತು ಆಧುನೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇತ್ತೀಚೆಗಷ್ಟೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದರು. ಅಲ್ಲದೆ, ಶಸ್ತ್ರಾಸ್ತ್ರಗಳ ಖರೀದಿ ವೇಳೆ ‘ಮೇಕ್‌ ಇಂಡಿಯಾ’ ಅಭಿಯಾನದಡಿ ದೇಶೀಯ ಕಂಪನಿಗಳಿಗೆ ಒತ್ತು ನೀಡುವುದಾಗಿ ಅವರು ತಿಳಿಸಿದ್ದರು. ಜತೆಗೆ ಈಶಾನ್ಯ ಭಾರತದ ಚೀನಾ ಗಡಿ ಭಾಗದಲ್ಲಿ ಸೇನೆಯ ಸಮರ ಸನ್ನದ್ಧತೆಯನ್ನು ಖುದ್ದು ಪರಿಶೀಲನೆ ನಡೆಸಿದ್ದರು.

ಡಿಆರ್‌ಡಿಒಗೆ ಸೂಚನೆ: ಇದೇ ವೇಳೆ, ವಿವಿಧ ರೀತಿಯ ಸಣ್ಣ ಶಸ್ತ್ರಾಸ್ತ್ರಗಳ ತಯಾರಿಯನ್ನು ಅದರಲ್ಲೂ ವಿಶೇಷವಾಗಿ ಲೈಟ್‌ ಮೆಷಿನ್‌ಗನ್‌ಗಳ ತಯಾರಿಕೆಯನ್ನು ತ್ವರಿತಗೊಳಿಸುವಂತೆರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಒ) ಸರಕಾರ ಸೂಚಿಸಿದೆ.

‘ಎಲ್‌ಎಂಜಿ’ಗಳ ತಯಾರಿ ವಿಷಯದಲ್ಲಿ ‘ಡಿಆರ್‌ಡಿಒ’ ಹಲವು ಬಾರಿ ಗಡುವು ಮೀರಿರುವುದರಿಂದ, ಮುಂದಿನ ವಾರ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ.

”ಶಸ್ತ್ರಾಸ್ತ್ರ ಆಧುನೀಕರಣ ಯೋಜನೆಯು ಸೇನೆಯ ಪ್ರಮುಖ ಉಪಕ್ರಮವಾಗಿದ್ದು, ಇದು ಕಾಲ್ದಳದ ಒಟ್ಟಾರೆ ಸಾಮರ್ಥ್ಯ‌ವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲಿದೆ,” ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಹೊಸ ಆರ್‌ಎಫ್‌ಐ: ಆರಂಭಿಕವಾಗಿ 10,000 ‘ಎಲ್‌ಎಂಜಿ’ಗಳನ್ನು ಖರೀದಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸದ್ಯದಲ್ಲೇ ಪೂರೈಕೆದಾರರಿಂದ ಮಾಹಿತಿ ಕೋರುವ ಹೊಸ ‘ಆರ್‌ಎಫ್‌ಐ’ (ರಿಕ್ವೆಸ್ಟ್‌ ಫಾರ್‌ ಇನ್ಫರ್‌ಮೇಷನ್‌) ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

7.62 ತೋಟಾ ವ್ಯಾಸ (ಕ್ಯಾಲಿಬರ್‌) ಹೊಂದಿರುವ ಗನ್‌ಗಳ ಪೂರೈಕೆ ಟೆಂಡರ್‌ ಅನ್ನು ರಕ್ಷಣಾ ಸಚಿವಾಲಯ ಇತ್ತೀಚೆಗಷ್ಟೇ ರದ್ದುಪಡಿಸಿತ್ತು. ಇಂತಹ ಗನ್‌ಗಳನ್ನು ಪೂರೈಸಲು ಒಂದೇ ಕಂಪನಿ ಮುಂದೆ ಬಂದಿದ್ದರಿಂದ ಸರಕಾರ ಈ ಟೆಂಡರ್‌ ರದ್ದುಪಡಿಸಿತ್ತು.

7.62 ಎಂಎಂ ರೈಫಲ್‌ಗೆ ಸಮ್ಮತಿ: ಹೊಸ 7.62 ಎಂಎಂ ಅಸಾಲ್ಟ್‌ ರೈಫಲ್‌ ಖರೀದಿಗೂ ಸೇನೆ ಹಸಿರು ನಿಶಾನೆ ತೋರಿದೆ. ಶಸ್ತ್ರಾಸ್ತ್ರ ಖರೀದಿ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ರಕ್ಷಣಾ ಇಲಾಖೆಯ ಅತ್ಯುನ್ನತ ಮಂಡಳಿ ‘ಡಿಫೆನ್ಸ್‌ ಅಕ್ವಿಸಿಷನ್‌ ಕೌನ್ಸಿಲ್‌'(ಡಿಎಸಿ) ಸಹ ಸದ್ಯದಲ್ಲೇ ಇವುಗಳ ಖರೀದಿಗೆ ಸಮ್ಮತಿ ಸೂಚಿಸುವ ಸಾಧ್ಯತೆಯಿದೆ.

ಪ್ರಸ್ತುತ ಸೇನೆ ಬಳಸುತ್ತಿರುವ ‘ಐಎನ್‌ಎಸ್‌ಎಎಸ್‌’ ರೈಫಲ್‌ಗಳ ಬದಲಿಗೆ ಹೊಸ 7.62 ಎಂಎಂ ಗನ್‌ಗಳನ್ನು ಪೂರೈಸುವ ಪ್ರಸ್ತಾಪ ಹಳೆಯದಾದರೂ, ಹಲವು ಕಾರಣಗಳಿಂದ ಇದು ಸಾಕಾರಗೊಂಡಿರಲಿಲ್ಲ. ಗನ್‌ ವೈಶಿಷ್ಟ್ಯಗಳನ್ನು ಅಂತಿಮಗೊಳಿಸುವಲ್ಲಿ ಸೇನೆಯ ವೈಫಲ್ಯವೂ ಇಂತಹ ಕಾರಣಗಳಲ್ಲಿ ಒಂದಾಗಿತ್ತು. ‘ಐಎನ್‌ಎಸ್‌ಎಎಸ್‌’ ರೈಫಲ್‌ಗಳ ಬದಲಿಗೆ 7 ಲಕ್ಷ 7.62 ಎಂಎಂಎ ಅಸಲ್ಟ್‌ ಗನ್‌ಗಳನ್ನು ಸೇನೆ ಪೂರೈಸಬೇಕಿದೆ.

ರೈಫಲ್‌ ಫ್ಯಾಕ್ಟರಿ ಗನ್‌ಗಳ ತಿರಸ್ಕಾರ:

ಕಳೆದ ಜೂನ್‌ನಲ್ಲಿ ಸರಕಾರಿ ಸ್ವಾಮ್ಯದ ‘ರೈಫಲ್‌ ಫ್ಯಾಕ್ಟರಿ’ ತಯಾರಿಸಿದ್ದ ಅಸಲ್ಟ್‌ ರೈಫಲ್‌ಗಳನ್ನು ಸೇನೆ ತಿರಸ್ಕರಿಸಿತ್ತು. ಪಶ್ಚಿಮ ಬಂಗಾಳದ ಇಶಾಪೋರ್‌ನಲ್ಲಿರುವ ಈ ಕಂಪನಿ ತಯಾರಿಸಿದ್ದ ಗನ್‌ಗಳು ಫೈರಿಂಗ್‌ ರೇಂಜ್‌ನಲ್ಲಿ ಗುರಿ ತಲುಪಲು ಭಾರಿ ಮಟ್ಟದಲ್ಲಿ ವಿಫಲವಾದ ಕಾರಣ ಸರಕಾರ ಇವುಗಳನ್ನು ತಿರಸ್ಕರಿಸಿತ್ತು.

ಸೇನೆ ಬತ್ತಳಿಕೆಗೆ ಹೊಸ ಅಸ್ತ್ರ

7 ಲಕ್ಷ ಅಸಲ್ಟ್‌ ರೈಫಲ್‌ಗಳು

44,000 ಲೈಟ್‌ ಕಾಂಬ್ಯಾಟ್‌ ಗನ್ಸ್‌ (ಎಲ್‌ಎಂಜಿ)

44,600 ಕಾರ್ಬೈನ್‌ಗಳು

ಚೀನಾ ಗಡಿಯಲ್ಲಿ ಹೊಸ ಸೇತುವೆ ಉದ್ಘಾಟನೆ

ಚೀನಾ-ಭಾರತ ಗಡಿ ನಿಯಂತ್ರಣ ರೇಖೆ ಸನಿಹ ಲಡಾಕ್‌ ಪ್ರಾಂತ್ಯದ ಜನರ ಅನುಕೂಲಕ್ಕಾಗಿ ಬಾರ್ಡರ್‌ ರೋಡ್‌ ಆರ್ಗನೈಸೇಷನ್‌ (ಬಿಆರ್‌ಒ) ಹೊಸದಾಗಿ ನಿರ್ಮಿಸಿರುವ ಸಂಪರ್ಕ ಸೇತುವೆಯನ್ನು ಭಾನುವಾರ ಲೋಕಾರ್ಪಣೆ ಮಾಡಲಾಗಿದೆ. ಲೆಹ್‌-ಲೋಮಾ ರಸ್ತೆಯಲ್ಲಿ ಲಿಂಚೆ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ 30 ಮೀಟರ್‌ ಉದ್ದದ ಈ ಸೇತುವೆಯು ಲಡಾಕ್‌ ಮತ್ತು ಜಮ್ಮು-ಕಾಶ್ಮೀರದ ಶೀತ ಮರುಭೂಮಿ ಪ್ರಾಂತ್ಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಭಾರತದ ಗಡಿಯಲ್ಲಿ ಚೀನಾ ನಡೆಸುತ್ತಿರುವ ರಸ್ತೆ ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರತಿಯಾಗಿ ಭಾರತವೂ ಗಡಿಭಾಗದ ಜನರಿಗೆ ಹೆಚ್ಚಿನ ಮೂಲಸೌಕರ್ಯಗಳನ್ನು ಒದಗಿಸುತ್ತಿದೆ.

Comments are closed.