ರಾಷ್ಟ್ರೀಯ

4 ಲಕ್ಷ ರೂ. ವರದಕ್ಷಿಣೆ ಮರಳಿಸಿದ ಪ್ರಿನ್ಸಿಪಾಲ್‌

Pinterest LinkedIn Tumblr


ಪಟನಾ: ಮದ್ಯಪಾನದ ವಿರುದ್ಧ ಸಮರವನ್ನೇ ಸಾರಿ ಬಹುತೇಕ ಯಶಸ್ವಿಯಾದ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇದೀಗ ಸಾಮಾಜಿಕ ಪೀಡೆಗಳಾದ ವರದಕ್ಷಿಣೆ ಮತ್ತು ಬಾಲ್ಯ ವಿವಾಹದ ವಿರುದ್ಧ ಆಂದೋಲನ ಆರಂಭಿಸಿದ್ದಾರೆ. ಇದೀಗ, ನಿವೃತ್ತ ಕಾಲೇಜು ಪ್ರಿನ್ಸಿಪಾಲ್‌ ಒಬ್ಬರು ತಾವು ಮಗನ ಮದುವೆಗೆ ಪಡೆದಿದ್ದ ವರದಕ್ಷಿಣೆಯನ್ನು ಮರಳಿಸುವ ಮೂಲಕ ನಿತೀಶ್‌ ಸಂಕಲ್ಪಕ್ಕೆ ಬಲ ತುಂಬಿದ್ದಾರೆ.

ಭೋಜಪುರ್‌ ಜಿಲ್ಲೆಯ ನಿವಾಸಿ, ನಿವೃತ್ತ ಪ್ರಿನ್ಸಿಪಾಲ್‌ ಹರೀಂದ್ರ ಸಿಂಗ್‌ ಅವರು ಭಾನುವಾರ ನಿತೀಶ್‌ ಕುಮಾರ್‌ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದರು. ”ಮದುವೆ ಸಂದರ್ಭದಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂಬ ನಿಮ್ಮ ಮನವಿಯಿಂದ ನಾನು ಪ್ರೇರಿತನಾಗಿದ್ದೇನೆ. ಹಾಗಾಗಿ ಮಗನ ಮದುವೆಗೆ ಪಡೆದಿದ್ದ 4 ಲಕ್ಷ ರೂ. ಡೌರಿಯನ್ನು ಮರಳಿಸಲು ನಿರ್ಧರಿಸಿದ್ದೇನೆ,” ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಸಿಂಗ್‌ ಅವರನ್ನು ತಬ್ಬಿಕೊಂಡ ನಿತೀಶ್‌ ಕುಮಾರ ಅವರು ‘ನಿಮ್ಮ ಆದರ್ಶ ಮಾದರಿಯಾಗಲಿ’ ಎಂದು ಹಾರೈಸಿದರು. ಸಿಂಗ್‌ ಅವರು ಮಗನ ಮದುವೆಗೆ ಹೆಣ್ಣಿನ ಕಡೆಯಿಂದ 4 ಲಕ್ಷ ರೂ. ವರದಕ್ಷಿಣೆ ಪಡೆದಿದ್ದರು. ನಿತೀಶ್‌ ಕುಮಾರ್‌ ಅವರು ಅಕ್ಟೋಬರ್‌ 2ರಂದು ಈ ಆಂದೋಲನ ಆರಂಭಿಸಿದ್ದು, ಜನವರಿ 21ರಂದು ಮಾನವ ಸರಪಳಿ ರಚಿಸಲಾಗುವುದು ಎಂದು ಪ್ರಕಟಿಸಿದ್ದಾರೆ.

Comments are closed.