ಹೊಸದಿಲ್ಲಿ: ಪಾಕಿಸ್ತಾನದ ಪೌರತ್ವ ಪಡೆದುಕೊಂಡಿರುವ 431 ಹಿಂದೂಗಳಿಗೆ ಭಾರತ ಸರಕಾರ ದೀರ್ಘಕಾಲಿಕ ವೀಸಾ ನೀಡಲಾಗಿದೆ. ಅವರೀಗ ಪಾನ್ ಕಾರ್ಡ್, ಆಧಾರ್ ಕಾರ್ಡ್‌ಗಳಿಗೆ ಅರ್ಹತೆ ಹೊಂದಿದ್ದು, ಆಸ್ತಿ ಖರೀದಿಗೂ ಅವಕಾಶ ದೊರಕಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
”ಗೃಹ ಸಚಿವಾಲಯ ಕಳೆದ ತಿಂಗಳು 431 ಪಾಕಿಸ್ತಾನಿ ಪ್ರಜೆಗಳಿಗೆ ದೀರ್ಘಕಾಲಿಕ ವೀಸಾ ಮಂಜೂರು ಮಾಡಿದೆ. ಅವರು ದೇಶದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರುತ್ತಾರೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇಂದ್ರ ಸರಕಾರದ ಇತ್ತೀಚಿನ ನೀತಿಯನ್ವಯ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರಿಶ್ಚಿಯನ್‌ನಂತಹ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ದೀರ್ಘಕಾಲಿಕ ವೀಸಾದಲ್ಲಿ ಭಾರತದಲ್ಲಿ ವಾಸಿಸುವವರು ಸ್ವಂತ ಬಳಕೆಗೆ ಸಾಕಾಗುವಷ್ಟು ಸೂರು ಖರೀದಿಸಲು ಹಾಗೂ ಸ್ವ-ಉದ್ಯೋಗ ಮಾಡಲು ಸೂಕ್ತ ಜಾಗ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.
ಸೇನಾ ದಂಡು ಪ್ರದೇಶ ಸೇರಿದಂತೆ ನಿರ್ಬಂಧಿತ ಅಥವಾ ಸಂರಕ್ಷಿತ ಪ್ರದೇಶಗಳ ಒಳಗೆ ಅಥವಾ ಹೊರಗೆ ಸ್ಥಿರಾಸ್ತಿ ಖರೀದಿಸುವುದರಿಂದ ಅವರನ್ನು ಹೊರಗಿಡಲಾಗಿದೆ.
ಅಂತಹ ಸಮುದಾಯಗಳು ಪ್ಯಾನ್ ಕಾರ್ಡ್, ಆಧಾರ್ ಸಂಖ್ಯೆ ಹಾಗೂ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ, ಸ್ವ-ಉದ್ಯೋಗ ಅಥವಾ ವ್ಯಾಪಾರ ಮಾಡುವುದಕ್ಕೆ, ತಾವು ವಾಸಿಸುವ ರಾಜ್ಯದೊಳಗೆ ಸ್ವತಂತ್ರವಾಗಿ ಅಡ್ಡಾಡುವುದಕ್ಕೆ, ತಮ್ಮ ದೀರ್ಘಕಾಲಿಕ ವೀಸಾ ಪೇಪರ್‌ಗಳನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.
ದೀರ್ಘಕಾಲಿಕ ವೀಸಾ ಪಡೆದಿರುವ ಈ 431 ಪಾಕ್ ಪ್ರಜೆಗಳು ಈಗ ಭಾರತೀಯ ರಿಸರ್ವ್ ಬ್ಯಾಂಕಿನ ಪೂರ್ವಾನುಮತಿ ಇಲ್ಲದೆಯೇ ಬ್ಯಾಂಕ್ ಖಾತೆ ಕೂಡ ತೆರೆಯಬಹುದಾಗಿದೆ.
ಕೇಂದ್ರ ಗೃಹ ಖಾತೆ ಕಳೆದ ತಿಂಗಳು ಡಿಸೆಂಬರ್ 29ರಿಂದ 31ರ ತನಕ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಖಾಡಿಯಾನ್‌ನಲ್ಲಿ ನಡೆಯಲಿರುವ 123ನೇ ‘ಜಲ್ಸಾ ಸಲಾನ’ದಲ್ಲಿ ಪಾಲ್ಗೊಳ್ಳಲು ಅಹ್ಮಾದಿಯ್ಯ ಸಮುದಾಯದ 1800 ಮಂದಿಗೆ ಭದ್ರತಾ ಪರವಾನಗಿಯನ್ನೂ ನೀಡಿದೆ. ‘ಜಲ್ಸಾ ಸಲಾನ’ ಎಂಬುದು ಅಹ್ಮಾದಿಯ್ಯ ಸಮುದಾಯದ ವಾರ್ಷಿಕ ಸಭೆ.
ಕಳೆದ ವರ್ಷ ಪಾಕಿಸ್ತಾನಿ ಪ್ರಜೆಗಳ ಧಾರ್ಮಿಕ ಕೂಟಗಳಿಗೆ ಅವಕಾಶ ನೀಡಲಾಗಿಲ್ಲ. ಆದರೆ, 2015ರಲ್ಲಿ 5 ಸಾವಿರ ಮಂದಿ ಇಂತಹ ಕೂಟಗಳಲ್ಲಿ ಭಾಗಿಯಾಗಿದ್ದರು.