ರಾಷ್ಟ್ರೀಯ

ಪತಿಯ ಅನುಮತಿ ಇಲ್ಲದೆ ಗರ್ಭಪಾತ ಮಾಡಲು ಪತ್ನಿಗೆ ಸರ್ವ ಹಕ್ಕು ನೀಡಿದ ಸುಪ್ರೀಂ ಕೋರ್ಟ್

Pinterest LinkedIn Tumblr

ಹೊಸದಿಲ್ಲಿ, ಅ. 28: ತನ್ನ ಅನುಮತಿಯಿಲ್ಲದೆ ಗರ್ಭಪಾತಕ್ಕೊಳಗಾದ ತನ್ನ ಪ್ರತ್ಯೇಕಿತ ಪತ್ನಿಯಿಂದ ಪರಿಹಾರ ಬೇಡಿಕೆಯಿರಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ ಅಪೀಲನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಪ್ರಬುದ್ಧ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಲು ಯಾ ಗರ್ಭಪಾತಕ್ಕೊಳಗಾಗಲು ಸರ್ವ ಹಕ್ಕು ಹೊಂದಿದ್ದಾಳೆಂದೂ ನ್ಯಾಯಾಲಯ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಹಾಗೂ ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠವು ಈ ಹಿಂದೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆಯಲ್ಲದೆ ”ಪತಿ ಪತ್ನಿಯರ ನಡುವೆ ಇದ್ದ ಮನಸ್ತಾಪದ ಹಿನ್ನೆಲೆಯಲ್ಲಿ ಬೇಡವಾಗಿದ್ದ ಗರ್ಭವನ್ನು ತೆಗೆಸುವ ಪತ್ನಿಯ ನಿರ್ಧಾರ ಸರಿಯಾಗಿದೆ. ಇಬ್ಬರ ನಡುವಿನ ಸಂಬಂಧ ಹದಗೆಡಲು ಗರ್ಭಪಾತ ಕಾರಣವಲ್ಲ. ಗರ್ಭಪಾತಕ್ಕೆ ಪತ್ನಿಯೊಬ್ಬಳು ಪತಿಯ ಅನುಮತಿ ಪಡೆಯಲೇ ಬೇಕೆಂಬ ನಿಯಮವೇನಿಲ್ಲ,” ಎಂದು ಹೇಳಿದೆ. ”ಮಾನಸಿಕ ಅಸ್ವಸ್ಥ ಮಹಿಳೆಗೂ ತನಗೆ ಬೇಡವಾಗಿದ್ದರೆ ಗರ್ಭ ತೆಗೆಸುವ ಹಕ್ಕಿದೆ,” ಎಂದೂ ನ್ಯಾಯಾಲಯ ಹೇಳಿದೆ.

ಈ ತೀರ್ಪು ನೀಡಲಾದ ಪ್ರಕರಣಕ್ಕೆ ಸಂಬಂಧಿಸಿದ ದಂಪತಿಗೆ 1994ಲ್ಲಿ ವಿವಾಹವಾಗಿದ್ದು 1995ರಲ್ಲಿ ಅವರಿಗೊಬ್ಬ ಮಗ ಹುಟ್ಟಿದ್ದ. ಆದರೆ ಪತಿ ಪತ್ನಿಯರ ಸಂಬಂಧ ಹದಗೆಟ್ಟಿದ್ದ ಕಾರಣ ಮಹಿಳೆ ತನ್ನ ಮಗುವಿನೊಂದಿಗೆ ಹೆತ್ತವರ ಜತೆಗೆ 1999ರಿಂದ ವಾಸವಾಗಿದ್ದಳು. ತರುವಾಯ ಜೀವನಾಂಶ ಆಗ್ರಹಿಸಿ ಆಕೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಳು, ಈ ಪ್ರಕರಣವನ್ನು ಚಂಡೀಗಢದಲ್ಲಿನ ಲೋಕ ಅದಾಲತ್ ವಿಚಾರಣೆಗೆ ಕೈಗೆತ್ತಿಕೊಂಡು ಪತಿ ಪತ್ನಿ ಒಂದಾಗಿ ಬಾಳುವಂತೆ ಮನವೊಲಿಸಲಾಗಿತ್ತು. ನವೆಂಬರ್ 2002ರಿಂದ ಅವರಿಬ್ಬರೂ ಜತೆಯಾಗಿ ಬಾಳಲಾರಂಭಿಸಿದ್ದು ಜನವರಿ 2003ರಲ್ಲಿ ಮಹಿಳೆ ಗರ್ಭವತಿಯಾಗಿದ್ದಳು. ಆದರೆ ಪತಿ ಪತ್ನಿಯರ ಸಂಬಂಧದಲ್ಲಿ ಹೆಚ್ಚೇನೂ ಸುಧಾರಣೆಯಿಲ್ಲದ ಕಾರಣ ಆಕೆ ಗರ್ಭ ತೆಗೆಸಲು ನಿರ್ಧರಿಸಿದಾಗ ಪತಿ ಅದನ್ನು ವಿರೋಧಿಸಿ ದಾಖಲೆಗಳಿಗೆ ಸಹಿ ಹಾಕದೇ ಇದ್ದರೂ ಲೆಕ್ಕಿಸದೆ ಮುಂದುವರಿದಿದ್ದಳು. ನಂತರ ಆತ ತನಗಾದ ಮಾನಸಿಕ ಯಾತನೆಗೆ ರೂ 30 ಲಕ್ಷ ಪರಿಹಾರ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದ.

 

 

 

 

Comments are closed.