ರಾಷ್ಟ್ರೀಯ

ಹೋಟೆಲ್’ನಲ್ಲಿ ರಾಹುಲ್, ಹಾರ್ದಿಕ್ ರಹಸ್ಯ ಭೇಟಿ?: ಕುತೂಹಲ ಮೂಡಿಸಿದೆ ರಾಜಕೀಯ ನಡೆ

Pinterest LinkedIn Tumblr


ಅಹ್ಮದಾಬಾದ್: ಹೋಟೆಲ್ ವೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ನಾಯಕ ಹಾರ್ದಿಕ್ ಪಟೇಲ್ ಅವರು ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆಂಬ ಮಾತುಗಳು ಕೇಳಿ ಬರತೊಡಗಿದ್ದು, ಹಾರ್ದಿಕ್ ಅವರ ಈ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸತೊಡಗಿದೆ.

ಕೆಲ ದಿನಗಳ ಹಿಂದಷ್ಟೇ ಹಾರ್ದಿಕ್ ಪಟೇಲ್ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂಬ ವರದಿಗಳು ಕೇಳಿಬಂದಿದ್ದವು. ಈ ವೇಳೆ ಹಾರ್ದಿಕ್ ಅವರ ವರದಿಗಳನ್ನು ಅಲ್ಲಗೆಳೆದಿದ್ದರು.

ರಾಹುಲ್ ಹಾಗೂ ಹಾರ್ದಿಕ್ ಅವರು ಹೋಟೆಲ್ ವೊಂದರಲ್ಲಿ ರಹಸ್ಯವಾಗಿ ಮಾತುಕತೆ ನಡೆಸಿರುವುದನ್ನು ಖಾಸಗಿ ಸುದ್ದಿ ವಾಹಿನಿಯೊಂದು ಇದೀಗ ಬಹಿರಂಗಗೊಳಿಸಿದೆ.

ರಾಹುಲ್ ಗಾಂಧಿ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ ಬಳಿಕ ಹೋಟೆಲ್’ನ ಇಲವೇಟರ್’ಗೆ ಹಾರ್ದಿಕ್ ಪಟೇಲ್ ಪ್ರವೇಶಿಸುತ್ತಿರುವ ದೃಶ್ಯಗಳು ಸುದ್ದಿ ವಾಹಿನಿಗೆ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.

ಗುಜರಾತ್ ರಾಜ್ಯದ ಸುದ್ದಿ ವಾಹಿನಿಯೊಂದು ಈ ಸುದ್ದಿಯನ್ನು ಪ್ರಕಟಿಸಿದ್ದು, ಸೋಮವಾರದ ದಿನದಂದು ಉಮ್ಮೆದ್ ಹೋಟೆಲ್ ನಲ್ಲಿ 40 ನಿಮಿಷಗಳ ಕಾಲ ಹಾರ್ದಿಕ್ ಪಟೇಲ್ ಹಾಗೂ ರಾಹುಲ್ ಗಾಂಧಿಯವರು ಮಾತುಕತೆ ನಡೆಸಿದ್ದಾರೆಂದು ವರದಿಯಲ್ಲಿ ತಿಳಿಸಿದೆ. ಅಲ್ಲದೆ, ರಾಹುಲ್ ಹೋಟೆಲ್ ನಲ್ಲಿಯೇ ಹಾರ್ದಿಕ್ ಪಟೇಲ್ ಮಾತ್ರ ಹೋಟೆಲ್ ಒಳಗೆ ಪ್ರವೇಶ ಮಾಡಿರುವುದು ಹಾಗೂ ಹೊರಗೆ ಬಂದಿರುವುದು ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.

ಈ ವರದಿಯನ್ನು ತಳ್ಳಿ ಹಾಕಿರುವ ಹಾರ್ದಿಕ್ ಪಟೇಲ್ ಅವರು, ನಾನು ರಾಹುಲ್ ಗಾಂಧಿಯರನ್ನು ಭೇಟಿ ಮಾಡಿಲ್ಲ. ಬದಲಾಗಿ ಕಾಂಗ್ರೆಸ್’ನ ಗುಜರಾತ್ ರಾಜ್ಯ ಘಟಕದ ಉಸ್ತುವಾರಿ ಅಶೋಕ್ ಗೆಹ್ಲೊಟ್ ಅವರನ್ನು ಭೇಟಿ ಮಾಡಿ, ಪಟಿದಾರ್ ಸಮುದಾಯದ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸಿದ್ದೆ. ರಾಹುಲ್ ಗಾಂಧಿಯವರನ್ನು ಭೇಟಿ ಮಾಡಬೇಕೆಂದಿದ್ದರೆ ಸಾರ್ವಜನಿಕವಾಗಿಯೇ ಭೇಟಿ ಮಾಡುತ್ತೇನೆ. ಇದು ನನಗೆ ಮತ್ತಷ್ಟು ಶಕ್ತಿಯನ್ನು ಕೊಡುತ್ತದೆ. ರಾಹುಲ್ ಅವರನ್ನು ನಾನೇಕೆ ರಹಸ್ಯವಾಗಿ ಭೇಟಿ ಮಾಡಬೇಕು? ಎಂದು ಹೇಳಿದ್ದಾರೆ.

ಅಶೋಕ್ ಗೆಹ್ಲೊಟ್ ಕೂಡ ಈ ಬಗ್ಗೆ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿದ್ದು, ಹಾರ್ದಿಕ್ ಪಟೇಲ್ ಅವರನ್ನು ಹೋಟೆಲ್ ನಲ್ಲಿ ನನ್ನನ್ನು ಭೇಟಿ ಮಾಡಿದ್ದರು. ರಾಹುಲ್ ಗಾಂಧಿಯವರನ್ನು ಹಾರ್ದಿಕ್ ಭೇಟಿ ಮಾಡಿರಲಿಲ್ಲ. ಬಿಜೆಪಿ ಆದೇಶದ ಮೇರೆಗೆ ಈ ರೀತಿ ಮಾಡಲಾಗಿದೆ. ಹೋಟೆಲ್ ನಿಂದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗನ್ನೇಕೆ ಪಡೆದುಕೊಂಡರು? ಎಂದು ಪ್ರಶ್ನಿಸಿದ್ದಾರೆ.

Comments are closed.