ರಾಷ್ಟ್ರೀಯ

ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೋಗಲು ಬಯಸುವವರಿಗೆ ಏರ್ ಇಂಡಿಯಾ ವಿಮಾನಯಾನ ಯೋಗ! ಏನಿದು…ಮುಂದಿದೆ ಓದಿ…

Pinterest LinkedIn Tumblr

ನವದೆಹಲಿ: ಶೀಘ್ರದಲ್ಲೇ ಟಿಕೆಟ್ ಖಚಿತವಾಗದ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಪಡೆಯಲಿದ್ದಾರೆ..

ಹೌದು.. ಇಂತಹುದೊಂದು ಯೋಜನೆಗೆ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಅನುಮೋದನೆ ನೀಡುವ ಸಾಧ್ಯತೆ ಇದ್ದು, ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ-1 ಮತ್ತು ಎಸಿ-2 ಟಿಕೆಟ್ ಕಾಯ್ದಿರಿಸಿ, ಅದು ಖಾತ್ರಿಯಾಗದಿದ್ದರೆ, ಪ್ರಯಾಣಿಕರಿಗೆ ತಕ್ಷಣ ವಿಮಾನಯಾನಕ್ಕೆ ವ್ಯವಸ್ಥೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಆದರೆ ರೈಲು ಟಿಕೆಟ್ ಮತ್ತು ವಿಮಾನ ಟಿಕೆಟ್ ದರಗಳ ನಡುವೆ ವ್ಯತ್ಯಾಸವಿದ್ದು, ಈ ವ್ಯತ್ಯಾಸದ ದರವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ.

ಈ ಹಿಂದೆಯೇ ಈ ವಿಶಿಷ್ಠ ಯೋಜನೆಯನ್ನು ಪ್ರಸ್ತಾವಿಸಲಾಗಿತ್ತಾದರೂ ಏರ್ ಇಂಡಿಯಾ ಆಡಳಿತ ಮಂಡಳಿ ಇದಕ್ಕೆ ಅನುಮೋದನೆ ನೀಡಲು ವಿಳಂಬ ಮಾಡಿತ್ತು. ಅಶ್ವನಿ ಲೊಹಾನಿ ಅವರು ಏರ್‌ಇಂಡಿಯಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಂದರೆ ಕಳೆದ ಬೇಸಿಗೆಯಲ್ಲಿ ಈ ಯೋಜನೆ ರೂಪಿಸಿದ್ದರು. ಆದರೆ ರೈಲ್ವೆ ಇಲಾಖೆ ಇದಕ್ಕೆ ಧನಾತ್ಮಕವಾಗಿ ಸ್ಪಂದಿಸಿರಲಿಲ್ಲ. ಇದೀಗ ಲೊಹಾನಿ ರೈಲ್ವೆ ಮಂಡಳಿಯ ಅಧ್ಯಕ್ಷರಾಗಿದ್ದು, ಇದೀಗ ಪ್ರಸ್ತಾವನೆಯನ್ನು ಮತ್ತೆ ಏರ್‌ ಇಂಡಿಯಾ ಸಲ್ಲಿಸಿದರೆ ಅದಕ್ಕೆ ಒಪ್ಪಿಗೆ ನೀಡುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಲೊಹಾನಿ ಅವರು, “ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಹಳಷ್ಟು ಮಂದಿಗೆ ಅತ್ಯಧಿಕ ಬೇಡಿಕೆಯಿಂದಾಗಿ ಎಸಿ-2 ಟಿಕೆಟ್‌ ಗಳು ಖಾತ್ರಿಯಾಗುವುದಿಲ್ಲ. ಆದರೆ ತಕ್ಷಣ ರೈಲ್ವೆ ಇಲಾಖೆ ಇಂಥಹ ಪ್ರಯಾಣಿಕರ ಮಾಹಿತಿಯನ್ನು ಏರ್‌ ಇಂಡಿಯಾ ಜತೆ ಹಂಚಿಕೊಂಡರೆ, ಸ್ಪರ್ಧಾತ್ಮಕ ದರದಲ್ಲಿ, ವಿಮಾನಯಾನಕ್ಕೆ ವ್ಯವಸ್ಥೆ ಮಾಡುವ ಪ್ರಸ್ತಾವನೆ ರೂಪಿಸಲಾಗುವುದು” ಎಂದು ಹೇಳಿದ್ದಾರೆ.

ರೈಲ್ವೆ ಹಾಗೂ ಏರ್‌ಇಂಡಿಯಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾಗಿರುವುದರಿಂದ ಮಾಹಿತಿ ಹಂಚಿಕೆ ದೊಡ್ಡ ಸಮಸ್ಯೆಯಾಗದು. ಆದರೆ ಖಾಸಗಿ ವಿಮಾನಯಾನ ಕಂಪನಿಗಳ ಜತೆ ಈ ಮಾಹಿತಿ ಹಂಚಿಕೊಳ್ಳಬಹುದೇ ಎನ್ನುವುದು ಪ್ರಶ್ನೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಏರ್‌ಇಂಡಿಯಾ ಅಧ್ಯಕ್ಷ ಹೊಣೆ ಹೊತ್ತಿರುವ ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಬನ್ಸಾಲ್ ಅವರು, “ಇಂಥಹ ಪ್ರಸ್ತಾವನೆ ಮೊದಲ ಬಾರಿಗೆ ನನ್ನ ಗಮನಕ್ಕೆ ಬಂದಿದ್ದು, ರೈಲು ಹಾಗೂ ವಿಮಾನ ದರದಲ್ಲಿ ಬದಲಾವಣೆ ಇದೆ. ಈ ಬಗ್ಗೆ ಪರಿಶೀಲಿಸಲಾಗುವುದು” ಎಂದು ಹೇಳಿದ್ದಾರೆ.

ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಬನ್ಸಾಲ್ ಅವರಿಗೆ ಏರ್‌ಇಂಡಿಯಾ ಅಧ್ಯಕ್ಷ ಹೊಣೆಯನ್ನು ಹೆಚ್ಚುವರಿಯಾಗಿ ಆಗಸ್ಟ್ ಕೊನೆಗೆ ನೀಡಲಾಗಿತ್ತು.

ಇನ್ನು ಅಶ್ವನಿ ಲೊಹಾನಿ ಅವರ ಈ ಪ್ರಸ್ತಾವನೆ ಬಹುಶಃ ನಷ್ಟದಲ್ಲಿರುವ ಏರ್ ಇಂಡಿಯಾ ಸಂಸ್ಥೆಗೆ ಉತ್ತೇಜನ ನೀಡುವ ಸಾಧ್ಯತೆ ಇದ್ದು, ಏರ್ ಇಂಡಿಯಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

Comments are closed.