
ಹೊಸದಿಲ್ಲಿ: ದೀಪಾವಳಿ ಅಂಗವಾಗಿ ವಾರಾಣಸಿಯಲ್ಲಿ ಹಿಂದೂ ದೇವರಿಗೆ ‘ಆರತಿ’ ಬೆಳಗಿದ ಮುಸ್ಲಿಂ ಮಹಿಳೆಯರ ವಿರುದ್ಧ ಫತ್ವಾ ಜಾರಿ ಮಾಡಿರುವ ದಾರುಲ್ ಉಲೂಮ್ ದೇವಬಂದ್, ಮುಸ್ಲಿಮರು ಅಲ್ಲಾನನ್ನು ಹೊರತಾದ ಅನ್ಯ ದೇವರ ಪೂಜೆ ಮಾಡುವುದು ನಿಷಿದ್ಧ ಎಂದಿದೆ.
”ಮುಸ್ಲಿಮರು ಕಟ್ಟುನಿಟ್ಟಾಗಿ ಅಲ್ಲಾನನ್ನು ಮಾತ್ರ ಸ್ಮರಿಸಬೇಕು. ಒಂದು ವೇಳೆ ಅಲ್ಲಾ ಹೊರತಾದ ಬೇರೆ ದೇವರನ್ನು ಪೂಜಿಸಿದರೆ ಅಂಥವರು ‘ಮುಸ್ಲಿಂ ಉಲೆಮಾ’ಗಳಾಗಿ ಉಳಿಯುವುದಿಲ್ಲ,” ಎಂದು ದೇವಬಂದ್ ಪ್ರತಿನಿಧಿ ತಿಳಿಸಿದ್ದಾರೆ.
ಮುಸ್ಲಿಂ ಮಹಿಳೆಯರು ವಾರಣಸಿಯಲ್ಲಿ ಶ್ರೀರಾಮಚಂದ್ರನಿಗೆ ಆರತಿ ಬೆಳಗುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಭಾರತದ ಇಸ್ಲಾಂ ಧರ್ಮ ಭೋದನೆಯ ಅತಿ ದೊಡ್ಡ ಕೇಂದ್ರ ಎನಿಸಿರುವ ದಾರುಲ್ ಉಲೂಮ್ ದೇವಬಂದ್ ತೀವ್ರ ಅಸಮಾಧಾನ ವ್ಯಕ್ತ ಪಡಿಸಿತ್ತು. ಮುಸ್ಲಿಂ ಮಹಿಳಾ ಫೌಂಡೇಷನ್ ಮತ್ತು ವಿಶಾಲ ಭಾರತ್ ಸಂಸ್ಥಾನ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದ್ದವು. ಈ ಕಾರ್ಯಕ್ರಮವನ್ನು ದಾರುಲ್ ವಿರೋಧಿಸಿತ್ತು. ಮುಸ್ಲಿಂ ಮಹಿಳೆಯರ ಇಂತಹ ಆಚರಣೆಗಳ ವಿರುದ್ಧ ಫತ್ವಾ ಹೊರಡಿಸಿತ್ತು.
ಸಾಮಾಜಿಕ ತಾಣಗಳಲ್ಲಿ ಫೋಟೊ ಹಾಕುವುದನ್ನು ಭಾರತೀಯ ಮುಸ್ಲಿಮರು ನಿಷೇಧಿಸಿ ಫತ್ವಾಹೊರಡಿಸಿದ ಬೆನ್ನಲ್ಲೇ ಅನ್ಯ ಧರ್ಮೀಯ ದೇವರ ಪೂಜೆ ವಿರುದ್ಧವೂ ಇದೀಗ ಫತ್ವಾ ಜಾರಿ ಮಾಡಲಾಗಿದೆ.
‘ಶ್ರೀರಾಮ ನಮ್ಮ ಸನಾತನ ದೇವರು. ನಾವು ನಮ್ಮ ಹೆಸರು ಮತ್ತು ಧರ್ಮವನ್ನು ಬದಲಾಯಿಸಿಕೊಂಡಿದ್ದೇವೆ ನಿಜ, ಆದರೆ ಸನಾತನ ಪರಂಪರೆಯನ್ನು ಬದಲಾಯಿಸಿಕೊಳ್ಳಲಾಗದು. ಶ್ರೀರಾಮನನ್ನು ಪ್ರಾರ್ಥಿಸುವುದರಿಂದ ಹಿಂದೂ-ಮುಸ್ಲಿಮರ ನಡುವೆ ಭಾವೈಕ್ಯತೆ ಬೆಳೆಯುತ್ತದೆ.’
-ನಜ್ನೀನ್ ಅನ್ಸಾರಿ, ತಂಡದ ಮುಂದಾಳು
Comments are closed.