ರಾಷ್ಟ್ರೀಯ

ಗುಜರಾತ್ ನಲ್ಲಿ ರೋರೋ ಸಮುದ್ರಯಾನ ಸೇವೆ ಸೇರಿದಂತೆ ವಿವಿಧ ಯೋಜನೆಗಳಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ

Pinterest LinkedIn Tumblr

ಅಹಮದಾಬಾದ್: ಗುಜರಾತ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಬಹು ನಿರೀಕ್ಷಿತ ರೋರೋ ಸಮುದ್ರಯಾನ ಸೇವೆ ಸೇರಿದಂತೆ ವಿವಿಧ ಯೋಜನೆಗಳಿಗೆ ಹಸಿರು ನಿಶಾನೆ ತೋರಿದ್ದಾರೆ.

ಭಾನುವಾರ ಮಧ್ಯಾಹ್ನ ಗುಜರಾತ್ ನ ಭಾವ್ ನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಬಳಿಕ ಅಲ್ಲಿಂದ ಘೋಘಾಗೆ ತೆರಳಿದರು. ಅಲ್ಲಿ ಗುಜರಾತ್‌’ನ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ ಪ್ರಾಂತಗಳಿಗೆ ಜಲ ಸಂಪರ್ಕ ಕಲ್ಪಿಸುವ ರೊರೊ ಸಮುದ್ರಯಾನ ಸೇವೆಯನ್ನು ಉದ್ಘಾಟಿಸಿದರು. ಒಟ್ಟಾರೆಯಾಗಿ ಗುಜರಾತ್ ನಲ್ಲಿ ಇಂದು ಪ್ರಧಾನಿ ಮೋದಿ ಸುಮಾರು ರು.1,140 ಕೋಟಿ ವೆಚ್ಚದ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದು, ಸೌರಾಷ್ಟ್ರದ ಭಾವಂಗರ್ ಜಿಲ್ಲೆಯ ಘೋಘ ಮತ್ತು ದಕ್ಷಿಣ ಗುಜರಾತ್‌ ನ ದಹೇಜ್ ಗಳ ಮಧ್ಯೆ ಸಮುದ್ರಯಾನ ಸೇವೆ ಆರಂಭವಾಗಲಿದೆ. ಸಮುದ್ರಯಾನ ಸೇವೆಯಿಂದ ನಗರಗಳ ನಡುವಣ ಪ್ರಯಾಣದ ಅವಧಿ ಹತ್ತು ಪಟ್ಟು ಕಡಿಮೆ ಆಗಲಿದೆ ಎಂದು ಮೂಲಗಳು ಹೇಳಿವೆ.

ಇನ್ನು ಈ ಕಾರ್ಯಕ್ರಮಗಳ ಬಳಿಕ ಪ್ರಧಾನಿ ಮೋದಿ ವಡೋದರಾ ವಿಮಾನ ನಿಲ್ದಾಣದವರೆಗೂ 14 ಕಿ.ಮೀ ರೋಡ್ ಷೋ ನಡೆಸಲಿದ್ದಾರೆ.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿ ಅವರು ತಮ್ಮ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇದು 19ನೇ ಬಾರಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ತಿಂಗಳು ಮೂರನೇ ಬಾರಿಗೆ ಗುಜರಾತ್ ‘ಗೆ ಭೇಟಿ ನೀಡಿದ್ದು, ಡಿಸೆಂಬರ್‌ ವೇಳೆಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಮೋದಿ ಅವರ ನಿರಂತರ ರಾಜ್ಯ ಪ್ರವಾಸ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

Comments are closed.