ರಾಷ್ಟ್ರೀಯ

ನಾವು ನಡೆಸಿದ ಹೋರಾಟ ಅರುಷಿಗಾಗಿ, ನಮ್ಮ ಬಿಡುಗಡೆಗಾಗಿ ಅಲ್ಲ: ತಲ್ವರ್ ಕುಟುಂಬ

Pinterest LinkedIn Tumblr


ನವದೆಹಲಿ: ನಾಲ್ಕು ವರ್ಷಗಳ ನಂತರ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡು ಗಜಿಯಾಬಾದ್ ನ ದಾಸ್ನಾ ಜೈಲಿನಿಂದ ಹೊರಬಂದ ದಂತ ವೈದ್ಯ ದಂಪತಿ ರಾಜೇಶ್ ಮತ್ತು ನೂಪುರ್ ತಲ್ವಾರ್ ಭಾವರಹಿತವಾಗಿ ಕಂಡುಬಂದರು. 2008ರಲ್ಲಿ ತಮ್ಮ ಮಗಳು ಅರುಷಿ ಮತ್ತು ನೇಪಾಳ ಮೂಲದ ಸಹಾಯಕ ಹೇಮರಾಜ್ ಬಂಜಡೆ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲಹಾಬಾದ್ ಹೈಕೋರ್ಟ್ ಕಳೆದ ಗುರುವಾರ ತಲ್ವಾರ್ ದಂಪತಿಯನ್ನು ಆರೋಪಮುಕ್ತಗೊಳಿಸಿದೆ.
ದಂಪತಿ ನಾಲ್ಕು ವರ್ಷಗಳನ್ನು ಜೈಲಿನಲ್ಲಿ ಕಳೆದು ನಿನ್ನೆ ಬಿಡುಗಡೆಗೊಂಡರು. ಜೈಲಿನಿಂದ ಹೊರಬಂದ ದಂಪತಿ ಮುಖದಲ್ಲಿ ದುರಂತ ಮತ್ತು ಆಯಾಸದ ಛಾಯೆ ಕಂಡುಬರುತ್ತಿತ್ತು. ಸುತ್ತಲೂ ಸುತ್ತುವರಿದ ಪೊಲೀಸರ ಭದ್ರತೆ ಮತ್ತು ಮಾಧ್ಯಮಗಳ ಕ್ಯಾಮರಾಗಳ ಫ್ಲಾಶ್ ಗಳ ನಡುವೆ ದಂಪತಿಯ ಕಣ್ಣು ಯಾರನ್ನೊ ಹುಡುಕುತಿತ್ತು.
ರಾಜೇಶ್ ತಲ್ವಾರ್ ಅವರ ಸೋದರ ದಿನೇಶ್ ಮತ್ತು ಅವರ ವಕೀಲರನ್ನು ಕಂಡಾಗ ದಂಪತಿಯ ಅಷ್ಟು ಹೊತ್ತು ಹಿಡಿದಿಟ್ಟಿದ್ದ ಭಾವನೆ ಕಟ್ಟೆಯೊಡೆದು ಬಂತು. ಒಂದು ಕ್ಷಣ ಸ್ಥಬ್ಧರಾದ ರಾಜೇಶ್ ನಂತರ ದಿನೇಶ್ ಅವರನ್ನು ತಬ್ಬಿ ಹಿಡಿದು ಒಂದೇ ಸಮನೆ ಅಳಲು ಆರಂಭಿಸಿದರು.ನಂತರ ಪೊಲೀಸರು ದಂಪತಿಗಾಗಿ ಸಿದ್ಧವಾಗಿದ್ದ ಕಾರಿನತ್ತ ತೆರಳಲು ಸೂಚಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಲು ತಲ್ವಾರ್ ದಂಪತಿ ನಿರಾಕರಿಸಿದರು. ಆಗ ರಾಜೇಶ್ ಅವರ ಸೊಸೆ ವಂದನಾ ತಲ್ವಾರ್, ಈ ಸಂದರ್ಭದಲ್ಲಿ ಅವರ ಮನಸ್ಥಿತಿಯನ್ನು ಅರಿತು ಅವರ ಖಾಸಗಿತನವನ್ನು ಕಾಪಾಡಲು ಸಹಕರಿಸುವಂತೆ ಪತ್ರಕರ್ತರಲ್ಲಿ ಮನವಿ ಮಾಡಿಕೊಂಡರು.
ದಂಪತಿ ಜೈಲಿನಿಂದ ಹೊರಬಂದ ಒಂದು ಗಂಟೆ ನಂತರ ನೊಯ್ಡಾದ ಜಲ ವಾಯು ವಿಹಾರದಲ್ಲಿರುವ ನೂಪುರ್ ಪೋಷಕರ ಫ್ಲಾಟ್ ಗೆ ತೆರಳಿದರು. ಅಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದಿನೇಶ್, ನೂಪುರ್ ದಂಪತಿಯ ಬಿಡುಗಡೆಗೆ ಹೋರಾಡುವುದಕ್ಕಿಂತ ಹೆಚ್ಚಾಗಿ ಹೇಮರಾಜ್ ಜೊತೆಗೆ ಸಂಬಂಧ ಬೆಸೆಯಲಾಗಿದ್ದ ಅರುಶಿಯ ಶೀಲಕ್ಕೆ ಅಂಟಿಕೊಂಡಿದ್ದ ಕಳಂಕವನ್ನು ಹೋಗಿಸುವುದು ನಮ್ಮ ಉದ್ದೇಶವಾಗಿತ್ತು. ಇಂದು ದಂಪತಿಗೆ ತಮ್ಮ ಮಗಳಿಗೆ ನ್ಯಾಯ ಸಮಾಧಾನ ಉಂಟುಮಾಡಿದೆ ಎಂದು ಹೇಳಿದರು.
ನನ್ನ ಮಗಳು ಮತ್ತು ಅಳಿಯ ಬಂಧನಕ್ಕೊಳಗಾದಲ್ಲಿಂದ ನಾವು ದೀಪಾವಳಿ ಆಚರಿಸಿರಲಿಲ್ಲ. ಆದರೆ ಈ ವರ್ಷ ಅರುಶಿ ಇಲ್ಲದಿದ್ದರೂ ಕೂಡ ನಮಗೆ ಆಚರಣೆಯಾಗಿದೆ ಎಂದು ನೂಪುರ್ ತಂದೆ ಪ್ರತಿಕ್ರಿಯಿಸಿದ್ದಾರೆ.

Comments are closed.