ರಾಷ್ಟ್ರೀಯ

ತಾಜ್ ಮಹಲ್ ಜತೆ ರಾಷ್ಟ್ರಪತಿ ಭವನವನ್ನೂ ನಾಶ ಮಾಡಬೇಕು: ಅಜಂ ಖಾನ್

Pinterest LinkedIn Tumblr


ಹೊಸದಿಲ್ಲಿ: ತಾಜ್ ಮಹಲ್ ನಿರ್ಮಿಸಿದವರು ದೇಶದ್ರೋಹಿಗಳು ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ಶಾಸಕ ಸಂಗೀತ್ ಸೋಮ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದರ ಮುಂದುವರಿದ ಭಾಗವಾಗಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಹೇಳಿಕೆ ನೀಡಿದ್ದು, ‘ತಾಜ್ ಮಹಲ್‌ನಂತೆಯೇ ಗುಲಾಮಗಿರಿಯನ್ನು ನೆನಪಿಸುವಂತಹ ಸ್ಮಾರಕವಾದ ರಾಷ್ಟ್ರಪತಿ ಭವನವನ್ನೂ ನಾಶಪಡಿಸಬೇಕು’ ಎಂದು ಹೇಳಿ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

‘ನಮ್ಮನ್ನು ಗುಲಾಮಗಿರಿಗೆ ದೂಡಿ, ಆಳಿದವರನ್ನು ನೆನಪಿಸುವ ಸ್ಮಾರಕಗಳಾದ ಸಂಸತ್ ಭವನ, ಕುತುಬ್ ಮಿನಾರ್, ರಾಷ್ಟ್ರಪತಿ ಭವನ, ಕೆಂಪು ಕೋಟೆ, ತಾಜ್ ಮಹಲ್ ಸೇರಿದಂತೆ ಎಲ್ಲವನ್ನೂ ನಾಶಪಡಿಸಬೇಕೆಂದು ಈ ಹಿಂದೆಯೇ ಹೇಳಿದ್ದೇನೆ’ ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಖಾನ್ ಹೇಳಿದರು.

‘ಮಾಜಿ ಸಚಿವ ಅಜಂ ಖಾನ್ ಯಾವ ಅರ್ಥದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆದರೆ, ವಿಶ್ವದ ಅದ್ಬುತಗಳಲ್ಲೊಂದಾಗಿರುವ ಆಗ್ರಾದ ತಾಜ್ ಮಹಲ್‌ ಸೇರಿದಂತೆ ಐತಿಹಾಸಿಕ ಸ್ಮಾರಕಗಳ ಕುರಿತು ನಾಲಿಗೆ ಹರಿಬಿಡುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿ,’ ಎಂಬುದಾಗಿ ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.

ತಾಜ್‌ಮಹಲ್‌ ಭಾರತದ ಸಂಸ್ಕೃತಿಯಲ್ಲ: ಬಿಜೆಪಿ ಶಾಸಕ
ಹಿಂದೂಗಳನ್ನು ಸರ್ವನಾಶ ಮಾಡಲು ಪ್ರಯತ್ನಿಸಿದ್ದ’ ಮೊಘಲ್ ದೊರೆ ಷಾಜಹಾನ್‌ನನ್ನು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಭಾಗವಾಗಿ ಪರಿಗಣಿಸುವುದಾದರೆ ‘ನಾವು ಇತಿಹಾಸವನ್ನೇ ಬದಲಿಸುತ್ತೇವೆ’ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ವಿವಾದ ಹೊತ್ತಿಸಿದ್ದರು.

ಕೆಂಪು ಕೋಟೆ ನಿರ್ಮಿಸಿದ್ದು ದೇಶದ್ರೋಹಿಗಳೇ: ಓವೈಸಿ

ವಿಶ್ವವಿಖ್ಯಾತ ತಾಜ್‌ಮಹಲ್‌ನ್ನು ಓರ್ವ ದೇಶದ್ರೋಹಿ ನಿರ್ಮಿಸಿರುವುದೇ ಆದರೆ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿರುವ ಕೆಂಪು ಕೋಟೆಯನ್ನೂ ಅದೇ ದೇಶ ದ್ರೋಹಿಗಳು ನಿರ್ಮಿಸಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜ ಹಾರಿಸುವುದನ್ನು ನಿಲ್ಲಿಸುತ್ತಾರೆಯೇ? ಎಂದು ಎಐಎಂಐಎಂಎಸ್‌ ಅಧ್ಯಕ್ಷ ಅಸದುದ್ದೀನ್‌ ಓವೈಸಿ ಪ್ರಶ್ನಿಸಿದ್ದರು.

Comments are closed.