ರಾಷ್ಟ್ರೀಯ

ಅಕ್ರಮ ಗಣಿಗಾರಿಕೆ: ಶಶಿಕಲಾ ಸೋದರ ಸಂಬಂಧಿಗಳ ಹೆಸರಲ್ಲಿ ರೂ. 76.500 ಕೋಟಿ ವ್ಯವಹಾರ

Pinterest LinkedIn Tumblr


ಚೆನ್ನೈ, ಫೆ. ೧೨ – ತಮಿಳುನಾಡಿನಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಹಗ್ಗಜಗ್ಗಾಟ, ಕಿತ್ತಾಟ ಕುತೂಹಲ ಘಟ್ಟಕ್ಕೆ ಬಂದು ನಿಂತಿದೆ. ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವ ಎಐಎಡಿಎಂಕೆ ತಾತ್ಕಾಲಿಕ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ರಾಜಭವನದ ಮುಂದೆ ಅನಿರ್ದಿಷ್ಠಾವಧಿ ಧರಣಿ ನಡೆಸಲು ಮುಂದಾಗಿರುವ ಬೆನ್ನಲ್ಲೇ ಅಕ್ರಮ ಗಣಿಗಾರಿಕೆ, ಮರಳು ದಂಧೆಯ ಉರುಳು ಕೊರಳಿಗೆ ಸಿಲುಕಿದೆ.
ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡದಿದ್ದರೆ ರಾಜಭವನದ ಮುಂದೆ ಶಾಸಕರೊಂದಿಗೆ ಅನಿರ್ದಿಷ್ಠಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ. ಈ ನಡುವೆ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಅವರಿಗೆ ದಿನೇ ದಿನೇ ಶಾಸಕರ ಸಂಖ್ಯೆ ಹೆಚ್ಚಾಗುತ್ತಿರುವುದು ತಮಿಳುನಾಡು ರಾಜಕೀಯವನ್ನು ಕುತೂಹಲದ ಘಟ್ಟಕ್ಕೆ ತಂದು ನಿಲ್ಲಿಸಿದೆ.

ಪನ್ನೀರ್ ಸೆಲ್ವಂ ಅವರಿಗೆ ಇಂದು 4 ಸಂಸದರು ಹಾಗೂ 7ಕ್ಕೂ ಹೆಚ್ಚು ಶಾಸಕರು ಬೆಂಬಲ ಸೂಚಿಸಿದ್ದು, ಪನ್ನೀರ್ ಸೆಲ್ವಂ ಬೆಂಬಲ ದಿನೇ ದಿನೇ ಹೆಚ್ಚಾಗುತ್ತಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿ. ಮುಖ್ಯಮಂತ್ರಿ ಜೆ. ಜಯಲಲಿತಾ ಅವರೊಂದಿಗೆ 2ನೇ ಆರೋಪಿಯಾಗಿರುವ ಶಶಿಕಲಾ ನಟರಾಜನ್ ಅವರ ಪ್ರಕರಣದ ತೀರ್ಪು ನಾಳೆ ಅಥವಾ ನಾಡಿದ್ದು ಸುಪ್ರೀಂಕೋರ್ಟ್ ಮುಂದೆ ಬರಲಿದೆ ಎಂದು ಹೇಳಲಾಗಿತ್ತಾದರೂ ಪ್ರಕರಣದ ತೀರ್ಪು ಮತ್ತಷ್ಟು ವಿಳಂಬವಾಗುವ ಎಲ್ಲಾ ಸಾಧ್ಯತೆಗಳಿವೆ.
ಸುಪ್ರೀಂಕೋರ್ಟ್ ನೀಡುವ ತೀರ್ಪು ಶಶಿಕಲಾ ಅವರ ರಾಜಕೀಯ ಭವಿಷ್ಯದ ಜತೆಗೆ ಅವರ ಹಣೆಬರಹ ನಿರ್ಧಾರ ಮಾಡಲಿದೆ. ಇದಕ್ಕೂ ಮುನ್ನವೇ ಮುಖ್ಯಮಂತ್ರಿ ಪಟ್ಟ ಅಲಂಕರಿಸಬೇಕು ಎನ್ನುವ ಅವರ ಕನಸಿಗೆ ಅಡ್ಡಿ ಆತಂಕಗಳು ಎದುರಾಗುತ್ತಿವೆ. 131 ಜನ ಶಾಸಕರ ಬೆಂಬಲವಿರುವ ಪತ್ರವನ್ನು ರಾಜ್ಯಪಾಲರಿಗೆ ನೀಡಿ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಹಕ್ಕು ಮಂಡಿಸಿದರೂ ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಶಶಿಕಲಾ ನಟರಾಜನ್ ಹಾಗೂ ಅವರ ತಂಡವನ್ನು ಕೆರಳಿಸಿದೆ.
ಹೀಗಾಗಿ ರಾಜ್ಯಪಾಲರ ನಡೆಯ ವಿರುದ್ಧ ಶಶಿಕಲಾ ನಟರಾಜನ್ ಪಡೆ ಅನಿರ್ದಿಷ್ಠಾವಧಿ ಧರಣಿ ನಡೆಸಲು ಮುಂದಾಗಿದ್ದು, ಅಗತ್ಯಬಿದ್ದರೆ ದೆಹಲಿಗೆ ತೆರಳಿ ರಾಷ್ಟ್ರಪತಿಗಳ ಮುಂದೆಯೂ ಶಾಸಕರ ಪರೇಡ್ ನಡೆಸಲು ಶಶಿಕಲಾ ಮುಂದಾಗಿದ್ದಾರೆ.
ತಮಿಳುನಾಡಿನ ರಾಜಕೀಯ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎನ್ನುವ ಕುತೂಹಲದ ಬೆನ್ನಲ್ಲೇ ಶಶಿಕಲಾ ಸೋದರ ಸಂಬಂಧಿಗಳಾದ ವಿ.ಎಸ್. ಶಿವಕುಮಾರ್, ಕಾರ್ತಿಕೇಯನ್, ಕಲಿಯ ಪೆರುಮಾಳ್ ಹಾಗೂ ಎಸ್. ವೈಕುಂಠರಾಜನ್ ಸಹಭಾಗಿತ್ವದ ವರ್ಲ್ಡ್ ರಾಕ್ ಪ್ರೈವೆಟ್ ಲಿಮಿಟೆಡ್ ಕಂಪನಿ ಹಾಗೂ ವಿ.ವಿ ಮಿನರಲ್ಸ್ ಅಕ್ರಮವಾಗಿ ಕಡಲ ತೀರ ಮತ್ತು ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದು, ಇದರ ಮೊತ್ತ 76,500 ಕೋಟಿ ರೂ.ಗೂ ಮಿಗಿಲು ಎಂದು ಹೇಳಲಾಗಿದ್ದು, ಅಕ್ರಮ ಮರಳುಗಾರಿಕೆ ಹಾಗೂ ಗಣಿಗಾರಿಕೆ ಹುರುಳು ಶಶಿಕಲಾ ಸುತ್ತ ಸುತ್ತಿಕೊಂಡಿದೆ.
ಕಡಲ ತೀರದ ಮರಳು ಗಣಿಗಾರಿಕೆ ನಿಷೇಧಿಸಿದರೂ ಅಕ್ರಮವಾಗಿ ವಿ.ವಿ. ಮಿನರಲ್ಸ್ 9.65 ಲಕ್ಷ ಟನ್ ಭಾರ ಕನಿಜ ಸಂಪತ್ತನ್ನು ಅಕ್ರಮವಾಗಿ ಸಾಗಾಟ ಮಾಡಿರುವುದು ಬೆಳಕಿಗೆ ಬಂದಿದೆ. ಇದು ಸಹಜವಾಗಿ ಶಶಿಕಲಾ ನಟರಾಜನ್ ಕೊರಳಿಗೆ ಸುತ್ತಿಕೊಂಡಿದ್ದು, ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕಣ್ಣಿಟ್ಟಿದ್ದ ಅವರಿಗೆ ದಿನಕ್ಕೊಂದಂತೆ ಸಂಕಷ್ಟಗಳು ಎದುರಾಗುತ್ತಿವೆ.
ಶಶಿಕಲಾ ಸೋದರ ಸಂಬಂಧಿಗಳು ಅಕ್ರಮ ಗಣಿಗಾರಿಕೆ ಹಾಗೂ ಮರಳು ದಂಧೆಯಲ್ಲಿ ಭಾಗಿಯಾಗಿದ್ದ ಬಗ್ಗೆ ವರದಿ ನೀಡಿದ್ದ ತೂತುಕುಡಿ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ಎತ್ತಂಗಡಿ ಮಾಡಲಾಗಿತ್ತು. ಅಲ್ಲದೆ, ಅಕ್ರಮ ಗಣಿಗಾರಿಕೆಯನ್ನು ಪ್ರಶ್ನಿಸಿದ ಜಿಲ್ಲಾಧಿಕಾರಿಯೊಬ್ಬರನ್ನು ಶಶಿಕಲಾ ಪಡೆ ಹತ್ಯೆ ಮಾಡಿದ್ದರು ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿರುವ ಶಶಿಕಲಾ ಅವರಿಗೆ ಗದ್ದುಗೆ ಸಿಗಲಿದೆಯೇ ಇಲ್ಲವೆ, ಸುಪ್ರೀಂಕೋರ್ಟ್ ಅವರನ್ನು ಜೈಲುಪಾಲಾಗಿಸಲಿದೆಯೇ ಅಥವಾ ನೆಮ್ಮದಿಯ ನಿಟ್ಟುಸಿರು ಬಿಡಲಿದೆಯೇ ಎನ್ನುವುದು ತಮಿಳುನಾಡಿನಾದ್ಯಂತ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Comments are closed.