ರಾಷ್ಟ್ರೀಯ

ಶಸ್ತ್ರಚಿಕಿತ್ಸೆ ಮೂಲಕ ಪುರುಷನಾದ ಮಹಿಳೆ!

Pinterest LinkedIn Tumblr


ತಿರುವನಂತಪುರ: ಮಹಿಳೆಯರನ್ನು ಪುರುಷನಾಗಿಸುವುದು, ಗಂಡನ್ನು ಹೆಣ್ಣಾಗಿಸುವ ಶಸ್ತ್ರಚಿಕಿತ್ಸೆ ವಿದೇಶಗಳಲ್ಲಿ ಆಗಾಗ ಮಾಡಲಾಗುತ್ತಿರುತ್ತದೆ. ಈಗ ನಮ್ಮ ದೇಶದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುತ್ತದೆ. ಆದರೆ ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜು ಮೊದಲ ಬಾರಿಗೆ ಅಂತಹದೊಂದು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.
ತಿರುವನಂತಪುರದ ಸರ್ಕಾರಿ ವೈದಕೀಯ ಕಾಲೇಜು ಆಸ್ಪತ್ರೆಯಲ್ಲಿ ಪರಿಣಿತ ವೈದ್ಯರ ತಂಡ 41 ವರ್ಷದ ಮಹಿಳೆಯನ್ನು ಪುರುಷನನ್ನಾಗಿ ಬದಲಾಯಿಸದ್ದಾರೆ. ಪುರುಷನಾಗಿ ಬದಲಾದ ಆ ಮಹಿಳೆಗೆ ಚಿಕ್ಕಂದಿನಿಂದಲೂ ಪುರುಷನ ಗುಣಗಳಿದ್ದವು. ಅಲ್ಲದೆ ಆಕೆಗೂ ತಾನು ಪುರುಷನಾಗಬೇಕೆಂದು ಹಂಬಲ ಕಾಡುತ್ತಿತ್ತು. ಚಿಕ್ಕಂದಿನಲ್ಲಿಯೇ ಆ ಮಹಿಳೆಯ ಪೋಷಕರು ತಮ್ಮ ಮಗಳ ನಡವಳಿಕೆಯ ಬಗ್ಗೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಪುತ್ರಿಯ ಹೆಬ್ಬಯಕೆಯನ್ನು ಈಡೇರಿಸುವ ಆರ್ಥಿಕ ತಾಕತ್ತು ಅವರಲ್ಲಿರಲಿಲ್ಲ. ಏಕೆಂದರೆ ಸಾಮಾನ್ಯವಾಗಿ ಲೈಂಗಿಕ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ 10 ಲಕ್ಷ ರೂ.ಗೂ ಹೆಚ್ಚು ವೆಚ್ಚವಾಗುತ್ತದೆ.
ಆ ಮಹಿಳೆ ಪುರುಷನಾಗುವ ಆಸೆಗೆ ನೀರೆದಿದ್ದು ತಿರುವನಂತಪುರದ ಸರ್ಕಾರಿ ವೈದಕೀಯ ಕಾಲೇಜು ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಶಸ್ತ್ರಚಿಕಿತ್ಸೆ ಮುಖ್ಯಸ್ಥರಾದ ಕೆ. ಅಜಯ್ ಕುಮಾರ್ ಅವರ ತಂಡ. ಮಹಿಳೆಯ ಪೋಷಕರು ಒಮ್ಮೆ ವೈದ್ಯ ಅಜಯ್ ಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಮಗಳ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಮೂಲಿಯಾಗಿ ಪ್ರಸ್ತಾಪವಿಟ್ಟಿದ್ದಾರೆ. ವೈದ್ಯರು ಪೋಷಕರ ಮನವಿಯನ್ನು ಆಲಿಸಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಲೈಂಗಿಕ ಪುನರ್ವಿತರಣೆ ಶಸ್ತ್ರಚಿಕಿತ್ಸೆಗೆ ತಗುಲಿದ್ದು ಬರೋಬ್ಬರಿ ಮೂರು ವರ್ಷಗಳ ಅವಧಿ
ಈ ರೀತಿಯ ಶಸ್ತ್ರಚಿಕಿತ್ಸೆ ಕೈಗೊಳ್ಳಬೇಕಾದರೆ ಮನೋವೈದ್ಯಶಾಸ್ತ್ರ ಇಲಾಖೆ ಮತ್ತು ವಿಶೇಷ ವೈದ್ಯಕೀಯ ಮಂಡಳಿಯಿಂದ ಅನುಮತಿ ಪಡೆಯಬೇಕು. ನಂತರ ಮಂಡಳಿಯ ನಿಯಮದ ಮೇರೆಗೆ ಒಂದು ವರ್ಷ ಆಕೆಯನ್ನು ಮನೋವೈದ್ಯರ ಬಳಿ ಪರಿವೀಕ್ಷಣೆಯಲ್ಲಿಟ್ಟು ಗುಣವಾಗುಣವನ್ನು ಪರೀಕ್ಷಿಸಬೇಕು. ತದ ನಂತರ ಶಸ್ತ್ರಚಿಕಿತ್ಸೆ ಮಾಡಬೇಕೆ ಅಥವಾ ಮಾಡಬಾರದೆ ಎನ್ನುವುದನ್ನು ನಿರ್ಧರಿಸಬೇಕು. ಮನೋವೈದ್ಯರ ಪರಿವೀಕ್ಷಣೆಯಲ್ಲಿದ್ದಾಗ ಆಕೆಯಲ್ಲಿ ಪರಿಪೂರ್ಣವಾಗಿ ಪುರುಷನ ಗುಣಗಳಿರುವುದು ಪತ್ತೆಯಾಗಿದೆ. ಅನಂತರ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಗಿದೆ.
ಆರಂಭವಾದ ಶಸ್ತ್ರಚಿಕಿತ್ಸೆ ಪ್ರಕ್ರಿಯೆ
ಮಾನವರನ್ನು ಲಿಂಗ ಪರಿವರ್ತನೆಗೊಳಿಸುವ ಲೈಂಗಿಕ ಪುನರ್ವಿತರಣೆ ಶಸ್ತ್ರಚಿಕಿತ್ಸೆ ವೈದ್ಯರಿಗೆ ಇದು ನಿಜವಾಗಿಯೂ ಸವಾಲೆ ಸರಿ. ಸ್ವಲ್ಪ ಯಡವಟ್ಟಾದರೂ ಮಹಿಳೆಯ ಪ್ರಾಣ ಹೋಗುವುದು ಇಲ್ಲವೇ ಶಾಶ್ವತ ಅಂಗವಿಕಲರಾಗುವ ಸಾಧ್ಯತೆಯಿರುತ್ತದೆ. ಪರಿಣಿತ ಕೆ. ಅಜಯ್ ಕುಮಾರ್ ತಂಡ ಚಿಕಿತ್ಸೆಗೆ ಅಣಿಯಾಯಿತು. ಮೊದಲ ಹಂತದಲ್ಲಿ ಸ್ತನಗಳನ್ನು ತೆಗೆಯಲು ಸ್ತನಛೇದನ ಚಿಕಿತ್ಸೆ ಮಾಡಲಾಯಿತು. ಇದರ ನಂತರ ಗರ್ಭಕಂಠ,ಗರ್ಭಕೋಶ ಮತ್ತು ಮಹಿಳಾ ಸಂಬಂಧಿತ ಸಂತಾನೋತ್ಪತ್ತಿ ಅಂಗಗಳನ್ನು ತೆಗೆದು ಹಾಕಲಾಯಿತು.
ನಂತರ ಆರಂಭವಾಗುವುದು ಅತ್ಯಂತ ಸವಾಲಿನ ಭಾಗವಾದ ಲಿಂಗ ಪರಿವರ್ತನಾ ಶಸ್ತ್ರಚಿಕಿತ್ಸೆಯ ಹಂತ. ಯೋನಿಯನ್ನು ಬೇರ್ಪಡಿಸಿ ಶಿಶ್ನವನ್ನು ಕೂಡಿಸುವುದು. ಈ ಮುಂಚೆಯೇ ಪುರುಷನ ರೀತಿಯಲ್ಲಿರುವ ಕೃತಕ ಶಿಶ್ನಕ್ಕಾಗಿ ಚಿಕಿತ್ಸೆಗೆ ಒಳಪಟ್ಟ ಅದೇ ಮಹಿಳೆಯ ತೊಡೆ ಹಾಗೂ ಕಾಲಿನ ಮಾಂಸವನ್ನು ತೆಗೆದು ಶಿಶ್ನವನ್ನಾಗಿ ಮಾಡಲಾಗಿತ್ತು. ಯೋನಿಯನ್ನು ಬೇರ್ಪಡಿಸಿದ ನಂತರ ಆ ಕೃತಕ ಶಿಶ್ನವನ್ನು ಯೋನಿಯಿದ್ದ ಜಾಗದಲ್ಲಿ ಸೇರಿಸಲಾಯಿತು. ಇದಕ್ಕಾಗಿ ವೈದ್ಯರ ತಂಡ 2 ಶಸ್ತ್ರಚಿಕಿತ್ಸೆ ಮೂಲಕ 8 ಗಂಟೆಗಳ ಅವಧಿ ತೆಗೆದುಕೊಂಡಿತ್ತು. ನಂತರ ಶಿಶ್ನ ಕೂಡುಕೊಳ್ಳುವುದಕ್ಕೆ ಒಂದು ವಾರ ಸಮಯ ಹಿಡಿಯಿತು. ಶಸ್ತ್ರಚಿಕಿತ್ಸೆಯೂ ಯಶಸ್ವಿಯಾಯಿತು.
ಚಿಕಿತ್ಸೆ ಪೂರ್ಣಗೊಂಡ ನಂತರ 3 ರಿಂದ 6 ತಿಂಗಳು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕಿತ್ತು. ಇದನ್ನು ಮಹಿಳೆ ಪರಿವರ್ತಿತ ಪುರುಷ ಪೂರೈಸಿದರು. ಇನ್ನು ಒಂದು ವರ್ಷದ ನಂತರ ವೈದ್ಯರು ಕೃತಕ ಕಸಿ ನಿರ್ಮಾಣ ಚಿಕಿತ್ಸೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಈ ಕೊನೆಯ ಹಂತದ ಚಿಕಿತ್ಸೆ ನಂತರ 41 ವರ್ಷದ ಪುರುಷರಾದ ಮಹಿಳೆ ಲೈಂಗಿಕ ಕ್ರಿಯೆಗೆ ಮುಂದಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Comments are closed.